ಬೆಂಗಳೂರು, ಮೇ 15- ಸಾಲ ತೀರಿಸಲು ಹಾಗೂ ಶೋಕಿ ಜೀವನಕ್ಕಾಗಿ ಮನೆ ಒಡತಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದ ಬಾಡಿಗೆದಾರ ಆರೋಪಿತೆಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕೋಲಾರ ಜಿಲ್ಲೆಯ ಮೋನಿಕಾ (24) ಬಂಧಿತ ಆರೋಪಿತೆ.
ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದಿದ್ದ ಮೋನಿಕಾ ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದಳು.ಮೂರು ತಿಂಗಳ ಹಿಂದೆಯಷ್ಟೇ ಮೋನಿಕಾ ಬಾಡಿಗೆಗೆ ಮನೆ ಕೇಳಿಕೊಂಡು ಕೋನಸಂದ್ರದ ನಿವಾಸಿ ಗುರುಮೂರ್ತಿ-ದಿವ್ಯ ದಂಪತಿ ಮನೆಗೆ ಬಂದಿದ್ದಳು.
ಆ ಸಂದರ್ಭದಲ್ಲಿ ಜೊತೆಗಿದ್ದ ಪ್ರಿಯಕರನನ್ನು ತನ್ನ ಗಂಡನೆಂದು ಮನೆ ಮಾಲೀಕರಿಗೆ ಪರಿಚಯಿಸಿ ಬಾಡಿಗೆ ಮನೆ ಗಿಟ್ಟಿಸಿಕೊಂಡಿದ್ದ ಆರೋಪಿತೆ, ತದ ನಂತರದಲ್ಲಿ ಒಂಟಿಯಾಗಿಯೇ ಇರುತ್ತಿದ್ದಳು. ಆಗಾಗ್ಗೆ ಪ್ರಿಯಕರ ಈಕೆಯ ಮನೆಗೆ ಬಂದು ಹೋಗುತ್ತಿದ್ದನು.
ಮೋನಿಕಾ ಶೋಕಿಗಾಗಿ ವಿಪರೀತ ಕೈ ಸಾಲ ಮಾಡಿಕೊಂಡಿದ್ದಲ್ಲದೆ, ಪ್ರಿಯಕರನಿಗೆ ಟಾಟಾ ಎಸ್ ವಾಹನ ಖರೀದಿಸಲು ಹಣ ಹೊಂದಿಸುತ್ತಿದ್ದಳು. ಆಗ ಆಕೆಯ ಕಣ್ಣು ಬಿದ್ದಿದ್ದು ಮನೆ ಮಾಲೀಕೆ ದಿವ್ಯಾ ಅವರ ಮೈಮೇಲಿದ್ದ ಚಿನ್ನಾಭರಣಗಳ ಮೇಲೆ.ಹೇಗಾದರೂ ಮಾಡಿ ಚಿನ್ನಾಭರಣಗಳನ್ನು ದೋಚಬೇಕೆಂದು ಮೋನಿಕಾ ಸಂಚು ರೂಪಿಸುತ್ತಿದ್ದಾಗ ದಿವ್ಯಾ ಅವರ ಅತ್ತೆ ಮಾವ, ಪತಿ ಬೆಳಗಾದರೆ ಕೆಲಸಕ್ಕೆ ಹೋಗುತ್ತಿದ್ದದ್ದನ್ನು ಗಮನಿಸುತ್ತಿದ್ದಳು.
ದಿವ್ಯಾ ಅವರು ತಮ ಎರಡು ವರ್ಷದ ಮಗುವಿನೊಂದಿಗೆ ಮನೆಯಲ್ಲಿರುವುದನ್ನು ಖಚಿತ ಪಡಿಸಿಕೊಂಡ ಮೋನಿಕಾ, ಮೇ 10 ರಂದು ಮನೆಯ ಹಿಂಬದಿಯಿಂದ ಮಾಲೀಕರ ಮನೆಗೆ ನುಗ್ಗಿ ದಿವ್ಯಾ ಅವರ ಕತ್ತು ಹಿಸುಕಿ ಕೊಲೆಮಾಡಿ ಮೈಮೇಲಿದ್ದ 36 ಗ್ರಾಂ ಸರ ದೋಚಿ ಏನೂ ಆಗಿಲ್ಲವೆಂಬಂತೆ ಸಹಜವಾಗಿ ತನ್ನ ಮನೆಗೆ ಹೋಗಿದ್ದಾಳೆ.
ಗೃಹಿಣಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಹಲವು ಆಯಾಮಗಳಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ ಬಾಡಿಗೆಗಿದ್ದ ಮೋನಿಕಾಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.