Friday, November 22, 2024
Homeರಾಷ್ಟ್ರೀಯ | Nationalನಾನು ಬದುಕಿರುವ ತನಕ ಸಂವಿಧಾನ ಬದಲಾವಣೆಗೆ ಬಿಡಲ್ಲ : ಮೋದಿ ಗುಡುಗು

ನಾನು ಬದುಕಿರುವ ತನಕ ಸಂವಿಧಾನ ಬದಲಾವಣೆಗೆ ಬಿಡಲ್ಲ : ಮೋದಿ ಗುಡುಗು

ನವದೆಹಲಿ,ಮೇ17- ತಮ್ಮ ಅಧಿಕಾರಾವಧಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಿದ ಕಾಂಗ್ರೆಸ್‌‍ ಮತ್ತು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ತಾನು ಬದುಕಿರುವವರೆಗೂ ಸಂವಿಧಾನದ ಮೂಲಭೂತ ಅಂಶಗಳೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಗಾಂಧಿ ಕುಟುಂಬದ ಮೂವರು ಮಾಜಿ ಪ್ರಧಾನಿಗಳಾದ ಜವಾಹರ್‌ಲಾಲ್‌ ನೆಹರು, ಇಂದಿರಾಗಾಂಧಿ, ರಾಜೀವ್‌ ಗಾಂಧಿ ಮತ್ತು ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಅವರು ತಮ ರಾಜಕೀಯ ಉದ್ದೇಶಗಳಿಗಾಗಿ ಸಂವಿಧಾನದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ತಿದ್ದುಪಡಿ ಮಾಡಲಾಗುವುದು ಎಂದು ಪ್ರತಿಪಕ್ಷಗಳು ಹೇಳುತ್ತಿರುವ ಬಗ್ಗೆ ಉತ್ತರಿಸಿದ ಅವರು, ಇದು ಕೇಳಲೇಬೇಕಾದ ಪ್ರಶ್ನೆ, ಸಂವಿಧಾನದೊಂದಿಗೆ ಮೊದಲು ಆಟವಾಡಿದವರು ಯಾರು? ಪಂಡಿತ್‌ ನೆಹರು ಅವರು ವಾಕ್‌ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಉದ್ದೇಶಿಸಿದ ಮೊದಲ ತಿದ್ದುಪಡಿಯನ್ನು ತಂದರು ಎಂದು ಹೇಳಿದರು.

ಮಾಧ್ಯಮವನ್ನು ನಿರ್ಬಂಧಿಸಲು ಅವರು ಕಾನೂನನ್ನು ತಂದರು. ಮತ್ತೊಂದು ತುರ್ತು ಪರಿಸ್ಥಿತಿ ಹೇರಲು ಅವಕಾಶ ನೀಡುವುದಿಲ್ಲ ಎಂದರು. 2013ರಲ್ಲಿ ಕೇಂದ್ರ ಸಚಿವ ಸಂಪುಟವು ಅಂಗೀಕರಿಸಿದ ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದು ಹಾಕಿದ್ದಕ್ಕಾಗಿ ಅವರು ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿಯನ್ನು ಟೀಕಿಸಿದರು. ಆನಂತರ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಂಡಿತು ಎಂದು ಹೇಳಿದರು.

ಈ ಮೋದಿ ತನ್ನ ಅಧಿಕಾರಾವಧಿಯಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಅನುಮತಿಸುವುದಿಲ್ಲ ಎಂದು ಭರವಸೆ ನೀಡಿದ ಅವರು, ಒಂದೇ ಕುಟುಂಬದ ನಾಲ್ವರು ವಿವಿಧ ಕಾಲಘಟ್ಟದಲ್ಲಿ ಸಂವಿಧಾನವನ್ನು ಧ್ವಂಸ ಮಾಡಿದ್ದಾರೆ. ಮೋದಿ ಬದುಕಿರುವವರೆಗೆ ಸಂವಿಧಾನದ ಮೂಲಭೂತ ಅಂಶಗಳಲ್ಲಿ ಯಾವುದೇ ಬದಲಾವಣೆಗೆ ನಾನು ಅವಕಾಶ ನೀಡುವುದಿಲ್ಲ, ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನಾನು ಅನುಮತಿಸುವುದಿಲ್ಲ ಎಂದು ಭರವಸೆ ನೀಡಿದರು.

RELATED ARTICLES

Latest News