ನವದೆಹಲಿ,ಮೇ17- ಮುಂಬೈನ ಅಟಲ್ ಸೇತು ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರಮೋದಿ, ಜನರನ್ನು ಸಂಪರ್ಕಿಸುವುದು ಮತ್ತು ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದೇನೂ ಇಲ್ಲ ಎಂದಿದ್ದಾರೆ.
ಈಚೆಗೆ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಂಡ ಅಟಲ್ ಸೇತು (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್) ಮತ್ತು ದೇಶದ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ರಶ್ಮಿಕಾ ಮಂದಣ್ಣ ಹೆಮ್ಮೆಯಿಂದ ಮಾತನಾಡಿದ್ದರು.
ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು ಎರಡು ಗಂಟೆ ಹಿಡಿಯುತ್ತಿತ್ತು. ಈಗ ಅದು 20 ನಿಮಿಷಗಳಿಗೆ ಇಳಿದಿದೆ. ಯೋಚಿಸಿದರೆ ಅಸಾಧ್ಯ ಎನಿಸುತ್ತದೆ. ಅದನ್ನು ಸಾಧಿಸಿ ತೋರಿಸಿದ್ದಾರೆ. ಗೋವಾದಿಂದ ಮುಂಬೈಗೆ, ಬೆಂಗಳೂರಿನಿಂದ ಮುಂಬೈ ರಸ್ತೆ ಹಾಗೂ ಇನ್ನಿತರೆ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿರುವ ರೀತಿ ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ನಟಿ ಮಾತನಾಡಿದ್ದರು. ಭಾರತ ಈಗ ವೇಗವಾಗಿ ಸಾಗುತ್ತಿದೆ. ಎಲ್ಲೂ ನಿಲ್ಲುತ್ತಿಲ್ಲ ಎಂದಿದ್ದರು.
ಕಳೆದ 10 ವರ್ಷಗಳಲ್ಲಿ ಭಾರತ ಅದ್ಭುತವಾದ ಅಭಿವೃದ್ಧಿಯನ್ನು ಸಾಧಿಸಿದೆ. ಪ್ರಗತಿ ಎಂಬುದು ಬಹಳ ವೇಗವಾಗಿ ಆಗುತ್ತಿದೆ. ಈ ಅಟಲ್ ಸೇತು ಕೇವಲ ಏಳು ವರ್ಷಗಳಲ್ಲಿ ಮುಗಿದಿದೆಯಂತೆ. ಹೊಸ ಭಾರತ ಉದಯವಾಗುತ್ತಿದೆ. ಭಾರತ ವಿಶ್ವದ ಬುದ್ಧಿವಂತ ದೇಶ ಎಂದು ಹೇಳಲು ಬಯಸುತ್ತೇನೆ.
ಭಾರತದ ಯುವಕರು ಜವಾಬ್ದಾರಿಯುತವಾಗಿ ಮತ ಹಾಕಬೇಕು. ನಮ್ಮ ದೇಶ ಸಾಧಿಸುತ್ತಿರುವ ಪ್ರಗತಿ ನಿಲ್ಲಬಾರದು. ಹಾಗಾಗಿ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಬೇಕು ಎಂದು ಹೇಳಿದ್ದರು.
ತಮ್ಮ ಎಕ್ಸ್ ಖಾತೆಯಲ್ಲಿ ರಶ್ಮಿಕಾ ಮಂದಣ್ಣ ಅವರ ಈ ವಿಡಿಯೋವನ್ನು ಹಂಚಿಕೊಂಡಿರುವ ಮೋದಿ, ಜನರ ಜೀವನ ಸುಧಾರಿಸುವುದಕ್ಕಿಂತ ತೃಪ್ತಿಕರವಾದುದು ಏನೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.