Friday, November 22, 2024
Homeರಾಜಕೀಯ | Politicsನಾಳೆಗೆ ವರ್ಷ ಪೂರೈಸಲಿದೆ ಗ್ಯಾರಂಟಿ ಸರ್ಕಾರ, ಸಂಭ್ರಮಾಚರಣೆಗೆ ನೀತಿ ಸಂಹಿತೆ ಅಡ್ಡಿ

ನಾಳೆಗೆ ವರ್ಷ ಪೂರೈಸಲಿದೆ ಗ್ಯಾರಂಟಿ ಸರ್ಕಾರ, ಸಂಭ್ರಮಾಚರಣೆಗೆ ನೀತಿ ಸಂಹಿತೆ ಅಡ್ಡಿ

ಬೆಂಗಳೂರು, ಮೇ 19- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಳೆಗೆ ವರ್ಷವಾಗಲಿದ್ದು, ನೀತಿ ಸಂಹಿತೆ ಹಿನ್ನೆಲೆಯಿಂದಾಗಿ ಮೊದಲ ವಾರ್ಷಿಕೋತ್ಸವದ ಆಚರಣೆಯನ್ನು ತಡೆಹಿಡಿಯಲಾಗಿದೆ.

2023 ರ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 13 ರಂದು ಪ್ರಕಟವಾಗಿತ್ತು. ಕಾಂಗ್ರೆಸ್‌‍ನ 135 ಶಾಸಕರು ಆಯ್ಕೆಯಾಗಿದ್ದರು. ಒಬ್ಬರು ಸ್ವತಂತ್ರ, ನಾಲ್ವರು ಪಕ್ಷೇತರರು ಕಾಂಗ್ರೆಸ್‌‍ ಪಕ್ಷವನ್ನು ಬೆಂಬಲಿಸಿದ್ದರು. ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಮುಖ್ಯಮಂತ್ರಿ ಆಯ್ಕೆಗೆ ಭಾರೀ ಕಸರತ್ತುಗಳು ನಡೆದಿದ್ದವು.

ದೆಹಲಿಯಲ್ಲಿ ಒಂದು ವಾರ ಕಾಲ ನಡೆದ ಚರ್ಚೆಯಲ್ಲಿ ಅಂತಿಮವಾಗಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಮಣೆ ಹಾಕಿತ್ತು. ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಡಿ.ಕೆ.ಶಿವಕುಮಾರ್‌ ಅವರಿಗೆ ಲೋಕಸಭಾ ಚುನಾವಣೆವರೆಗೂ ಪಕ್ಷದ ಹೊಣೆಗಾರಿಕೆಯ ಜೊತೆ ಉಪಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು.

ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕಳೆದ ಕೆಲ ತಿಂಗಳ ಹಿಂದೆ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌‍ ಉತ್ತಮ ಪ್ರದರ್ಶನ ತೋರಿಸಿದೆ. ಪ್ರಸ್ತುತ ಲೋಕಸಭಾ ಚುನಾವಣೆ ನಡೆದಿದ್ದು, ಫಲಿತಾಂಶ ವನ್ನು ನಿರೀಕ್ಷಿಸಲಾಗುತ್ತಿದೆ.

ಈ ನಡುವೆ ಕಳೆದ ವರ್ಷ ಪೂರ್ವ ಮುಂಗಾರು ಹಾಗೂ ಮುಂಗಾರಿನ ಮಳೆ ಕೊರತೆಯಿಂದಾಗಿ ತೀವ್ರ ಬರಗಾಲ ಎದುರಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ರಾಜ್ಯಸರ್ಕಾರ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಆರ್ಥಿಕ ನೆರವು ದೊರೆಯದಿದ್ದಾಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿ ಕಾನೂನು ಸಂಘರ್ಷದ ಮೂಲಕ 3,600 ಕೋಟಿ ರೂ. ಪರಿಹಾರ ಪಡೆದುಕೊಂಡು ಬೆಳೆನಷ್ಟ ಅನುಭವಿಸಿದ ರೈತರಿಗೆ ಹಂಚಿಕೆ ಮಾಡುತ್ತಿದೆ. ಅದಕ್ಕೂ ಮುನ್ನ ರಾಜ್ಯಸರ್ಕಾರವೇ ತನ್ನ ಬೊಕ್ಕಸದಿಂದ 34 ಲಕ್ಷ ರೈತರಿಗೆ 600 ಕೋಟಿ ರೂ.ಗಳನ್ನು ಜಮಾ ಮಾಡಿತ್ತು. ಕುಡಿಯುವ ನೀರು, ಮೇವು, ಉದ್ಯೋಗ ಸೃಷ್ಟಿಗೆ 800 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಬಳಕೆ ಮಾಡಲಾಗಿದೆ.

ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಎಂದು ಭಾವಿಸಲಾಗಿರುವ ಪಂಚಖಾತ್ರಿ ಯೋಜನೆಗಳ ಯಶಸ್ವಿ ಅನುಷ್ಠಾನ ಸಿದ್ದರಾಮಯ್ಯನವರ ಸರ್ಕಾರದ ಹೆಗ್ಗಳಿಕೆಯಾಗಿದೆ.ಮೊದಲ ಸಚಿವ ಸಂಪುಟ ಸಭೆಯಲ್ಲೇ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಲಾಗಿತ್ತು. 6 ತಿಂಗಳೊಳಗಾಗಿ ಎಲ್ಲಾ ಯೋಜನೆಗಳನ್ನೂ ಹಂತಹಂತವಾಗಿ ಅನುಷ್ಠಾನಗೊಳಿಸಲಾಗಿದೆ.

ಸರ್ಕಾರದ ನೀತಿ ಅಂಶಗಳ ಪ್ರಕಾರ, ರಾಜ್ಯದ ಶೇ.80 ರಷ್ಟು ಜನ ಅಂದರೆ, ಸರಿಸುಮಾರು 4.50 ಕೋಟಿ ಮಂದಿಗೆ ಪಂಚಖಾತ್ರಿ ಯೋಜನೆ ತಲುಪಿವೆ. ಬೆಲೆ ಏರಿಕೆಯಿಂದ ತತ್ತರಿಸಿದವರಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ವರದಾನ ಎಂದು ಭಾವಿಸಲಾಗಿದೆ.ಇದರ ನಡುವೆ ರಾಜ್ಯಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡಿಲ್ಲ ಎಂಬ ಆಕ್ಷೇಪವನ್ನೂ ವಿಪಕ್ಷಗಳು ಮಾಡಿವೆ. ಮದ್ಯದ ಬೆಲೆ, ಸ್ಟ್ಯಾಂಪ್‌ ಡ್ಯೂಟಿ, ಮೋಟಾರು ವಾಹನ ತೆರಿಗೆ ಸೇರಿದಂತೆ ಕೆಲವು ಸೇವಾಶುಲ್ಕಗಳನ್ನು ಹೆಚ್ಚಿಸಲಾಗಿದೆ ಎಂಬ ಟೀಕೆಗಳು ಇವೆ.

ಇತ್ತೀಚೆಗೆ ಹುಬ್ಬಳ್ಳಿಯ ನೇಹಾ ಮತ್ತು ಅಂಜಲಿ, ಕೊಡಗಿನ ಮೀನಾ ಅವರ ಕೊಲೆ ಪ್ರಕರಣಗಳು ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆಯ ಸವಾಲಿನ ಪ್ರಶ್ನೆಯನ್ನು ಮುಂದಿಟ್ಟಿವೆ. ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಕ್ಕೆ ಕಗ್ಗಂಟಾಗಿದೆ. ಬಿಜೆಪಿ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಂಬ ಕೂಗೆಬ್ಬಿಸಿ ಸರ್ಕಾರಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ನಡೆಸಿತ್ತು. ಇದೆಲ್ಲಾ ಸಿಹಿ-ಕಹಿಗಳ ನಡುವೆ ಸಿದ್ದರಾಮಯ್ಯ ಅವರ ಸರ್ಕಾರ ಯಾವುದೇ ಆತಂಕವಿಲ್ಲದೆ, ಒಂದು ವರ್ಷ ಸುಭದ್ರ ಆಡಳಿತ ನಡೆಸಿದೆ.

ಕಾಂಗ್ರೆಸ್‌‍ ಹೊರವಲಯದಲ್ಲಿ ಜಾತಿವಾರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಚರ್ಚೆಗಳು ಶುರುವಾಗಿದೆ. ಹೈಕಮಾಂಡ್‌ ಆರಂಭದಲ್ಲೇ ಅದಕ್ಕೆ ಬ್ರೇಕ್‌ ಹಾಕಿತ್ತು. ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆ, ನಾಯಕತ್ವ ಬದಲಾವಣೆಗಳ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಮಳೆಯಾಗುತ್ತಿರುವುದರಿಂದ ಬರದ ತೀವ್ರತೆ ತಗ್ಗಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜಕೀಯ ಅಧಿಕಾರದ ಸಂಘರ್ಷ ಯಾವ ಕ್ಷಣದಲ್ಲಾದರೂ ಸ್ಫೋಟಗೊಳ್ಳುವ ಆತಂಕವಿದೆ. ಅತೃಪ್ತ ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಿ ಸಮಾಧಾನಪಡಿಸಲಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ನೀತಿ ಸಂಹಿತೆ ಮುಕ್ತಾಯಗೊಂಡ ಬಳಿಕ ವಾರ್ಷಿಕೋತ್ಸವದ ಆಚರಣೆಗೆ ಸಿದ್ಧತೆಗಳಾಗಿವೆ.

RELATED ARTICLES

Latest News