ಬೆಂಗಳೂರು, ಮೇ 26- ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಅವರ ಪತ್ನಿ ಸುದೇಶ್ ಧನಕರ್ ನಾಳೆ ಬೆಳಗಾವಿ ಮತ್ತು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆ್ ಟ್ರಡಿಷನಲ್ ಮೆಡಿಸಿನ್ (ಎನ್‌ಐಟಿಎಂ) ಸಂಸ್ಥಾಪನಾ ದಿನ ಮತ್ತು ಬೆಳಗಾವಿಯ ಕೆಎಲ್‌ಇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನಂತರ, ಧನಕರ್ ಅವರು ಸಿಎಸ್ ಐಆರ್ – ಎನ್ ಎಎಲ್ ಬೆಂಗಳೂರು ಕ್ಯಾಂಪಸ್‌ಗೆ ಭೇಟಿ ನೀಡಲಿದ್ದು, ಲಘು ಯುದ್ಧ ವಿಮಾನ (ಎಲ್ಸಿಎ) ಘಟಕಗಳು ಮತ್ತು ಸಾರಸ್ನ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್‌ಎಎಲ್) ವಿನ್ಯಾಸಗೊಳಿಸಿದ ಲಘು ಸಾರಿಗೆ ವಿಮಾನ ವಿಭಾಗದಲ್ಲಿ ಸಾರಸ್ ಮೊದಲ ಭಾರತೀಯ ಬಹುಪಯೋಗಿ ನಾಗರಿಕ ವಿಮಾನವಾಗಿದೆ.
ಇದರೊಂದಿಗೆ ಧನಕರ್ ಅವರು ರಾಷ್ಟ್ರೀಯ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ (ಎನ್‌ಎಎಲ್) ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇಳೆ ಬೆಂಗಳೂರಿನ ರಾಜಭವನಕ್ಕೂ ಭೇಟಿ ನೀಡಲಿದ್ದಾರೆ. ಉಪ ರಾಷ್ಟ್ರಪತಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.