ಬೆಂಗಳೂರು, ಜೂ.3– ಬಿಜೆಪಿಯ ಅಧಿಕಾರವಧಿಯಲ್ಲಿ ಹಲವು ರೀತಿಯ ಹಗರಣಗಳಾಗಿದ್ದವು. ತಪ್ಪು ಯಾರೇ ಮಾಡಿದ್ದರೂ ಅದು ತಪ್ಪು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಬಿಜೆಪಿ ಸರ್ಕಾರದ 4 ವರ್ಷದ ಆಡಳಿತದಲ್ಲಿ ಜವಳಿ ನಿಗಮದಲ್ಲಿ ಮೈಸೂರು ಸ್ಯಾಂಡಲ್ ಸೋಪು ನಿಗಮದಲ್ಲಿ ಸೇರಿದಂತೆ ಪ್ರತಿ ಮಂಡಳಿಯಲ್ಲೂ ಹಗರಣಗಳಾಗಿದ್ದವು. ಹಿಂದೆ ಲೋಪಗಳಾಗಿದ್ದವು ಎಂಬ ಕಾರಣಕ್ಕೆ ಅದು ಮುಂದುವರೆಯಬೇಕು ಎಂದು ನಾವು ಬಯಸುವುದಿಲ್ಲ ಎಂದರು.
ತಪ್ಪನ್ನು ಯಾರೇ ಮಾಡಿದರೂ ಅದು ತಪ್ಪು. ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಲೋಪಗಳಾಗಿದ್ದರೆ ಅದನ್ನು ಪರಿಶೀಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಬಿಜೆಪಿಯವರಿಗೆ ಟೀಕೆ ಮಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.
ನಿನ್ನೆ ತಮಗೆ ಬೇರೆ ಕೆಲಸವಿದ್ದಿದ್ದರಿಂದಾಗಿ ಕಾಂಗ್ರೆಸ್ ಶಾಸಕಾಂಗ ಸಭೆಗೆ ಹೋಗಲಾಗಲಿಲ್ಲ. ಅಲ್ಲಿ ಬಹಳಷ್ಟು ವಿಚಾರಗಳು ಚರ್ಚೆಯಾಗಿವೆ ಎಂದು ತಿಳಿಸಿದರು.ಲೋಕಸಭಾ ಚುನಾವಣೋತ್ತರ ಸಮೀಕ್ಷೆ ಕೇಂದ್ರ ಸರ್ಕಾರದ ಪ್ರಾಯೋಜಕ ವರದಿಯಾಗಿದೆ. ಅದನ್ನು ಮೀರಿ ಅಚ್ಚರಿಯ ಫಲಿತಾಂಶವನ್ನು ನಾವು ನಿರೀಕ್ಷಿಸುತ್ತೇವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 85 ರಿಂದ 104 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಸಮೀಕ್ಷಾ ವರದಿಗಳು ಹೇಳಿದ್ದವು. ಆದರೆ ಎಲ್ಲವನ್ನೂ ಮೀರಿ 136 ಸ್ಥಾನಗಳಲ್ಲಿ ನಾವು ಗೆದ್ದಿದ್ದೇವೆ ಎಂದು ಹೇಳಿದರು.