ಬೆಂಗಳೂರು,ಜೂ.5- ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಬೆಳಿಗ್ಗೆ ನವದೆಹಲಿಗೆ ತೆರಳಿದರು.ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸುವಂತೆ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿತ್ತು.
ಇಂದು ಸಂಜೆ ನವದೆಹಲಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳ ಸಭೆ ನಡೆಯಲಿದ್ದು, ಲೋಕಸಭಾ ಚುನಾವಣಾ ಫಲಿತಾಂಶ, ಕೇಂದ್ರ ಸರ್ಕಾರ ರಚನೆಯ ರೂಪುರೇಷೆ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಜೆಡಿಎಸ್, ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವುದರಿಂದ ಕುಮಾರಸ್ವಾಮಿಯವರಿಗೆ ಆಹ್ವಾನ ನೀಡಲಾಗಿದೆ. ರಾಜ್ಯದಲ್ಲಿ ಜೆಡಿಎಸ್ 2 ಕ್ಷೇತ್ರಗಳಲ್ಲಿ ಜಯ ಗಳಿಸಿದೆ.
ಇಂದು ಮಧ್ಯಾಹ್ನ ದೆಹಲಿ ತಲುಪಲಿರುವ ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಲೋಕಸಭಾ ಚುನಾವಣಾ ಫಲಿತಾಂಶ, ಪ್ರಚಲಿತ ರಾಜಕೀಯ ವಿದ್ಯಮಾನ, ಎನ್‌ಡಿಎ ಸರ್ಕಾರ ರಚನೆ ಮೊದಲಾದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಎಚ್.ಡಿ.ಕೆ. ಗೆ ಸಚಿವ ಸ್ಥಾನ ? :
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಬಹುಮತದಿಂದ ಗೆದ್ದಿರುವ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಅಚಲ ವಿಶ್ವಾಸವನ್ನು ಜೆಡಿಎಸ್ ಮುಖಂಡರು, ನಾಯಕರು ಹೊಂದಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡು ಎನ್‌ಡಿಎ ಮೈತ್ರಿಕೂಟ ಬಹುಮತ ಗಳಿಸುತ್ತಿದ್ದಂತೆ ಜೆಡಿಎಸ್ ಪಾಳಯದಲ್ಲಿ ಸಚಿವ ಸ್ಥಾನದ ಆಶೆ ಚಿಗುರೊಡೆದಿದೆ.ಕುಮಾರಸ್ವಾಮಿ ಸಚಿವರಾಗುವುದು ಬಹುತೇಕ ಖಚಿತ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.