ಬೆಂಗಳೂರು, ಜೂ.6- ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಬೆಳಗಾವಿ ರಾಜಕಾರಣ ಮತ್ತೆ ಸದ್ದು ಮಾಡುತ್ತಿದ್ದು, ಜಾರಕಿಹೊಳಿ ಕುಟುಂಬ ಮತ್ತೆ ಚರ್ಚೆಯಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಅಭ್ಯರ್ಥಿಯಾಗಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಗೆಲುವು ಕಂಡಿದ್ದಾರೆ.
ಬೆಳಗಾವಿಯಿಂದ ಅಭ್ಯರ್ಥಿಯಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಸೋಲು ಕಂಡಿದ್ದಾರೆ. ಈ ಮೂಲಕ ಜಿಲ್ಲೆಯ ರಾಜಕಾರಣದಲ್ಲಿ ಮತ್ತೆ ಜಾರಕಿಹೊಳಿ ಕುಟುಂಬದ ಅಧಿಪತ್ಯ ಹೆಚ್ಚಾಗಿದೆ ಎಂಬ ಅಭಿಪ್ರಾಯಗಳಿವೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯಾದ್ಯಂತ ಫಲಿತಾಂಶ ಹಿನ್ನಡೆಗೆ ಚುನಾವಣೆ ನಾಯಕತ್ವ ವಹಿಸಿದ್ದ ನಿರ್ದೇಶಕರು, ನಿರ್ಮಾಪಕರು ಹೊಣೆಯಾಗುತ್ತಾರೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ಅಸಹನೆ ಹೊರಹಾಕಿದರು.
ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂದು ಸತೀಶ್ ಜಾರಕಿಹೊಳಿ ಹಲವು ಬಾರಿ ಪ್ರತಿಪಾದಿಸಿದ್ದರು. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯಮಟ್ಟದಲ್ಲಿ ತಮ ಪ್ರಭಾವ ಬೆಳೆಸಿಕೊಂಡು ಪುತ್ರ ಮೃಣಾಲ್‌ನನ್ನು ಕಣಕ್ಕಿಳಿಸಲು ಲಾಬಿ ಮಾಡಿದ್ದರು.
ಒಂದು ವೇಳೆ ಮೃಣಾಲ್‌ಗೆ ಟಿಕೆಟ್ ಕೊಟ್ಟು ಜಾರಕಿಹೊಳಿ ಕುಟುಂಬಕ್ಕೆ ಅವಕಾಶ ಸಿಗದೇ ಇದ್ದರೆ ಫಲಿತಾಂಶದಲ್ಲಿ ಏರುಪೇರಾಗಲಿದೆ ಎಂಬ ಆತಂಕದಲ್ಲಿ ಕಾಂಗ್ರೆಸ್‌ನ ವರಿಷ್ಠರು ಸತೀಶ್ ಜಾರಕಿಹೊಳಿ ಪುತ್ರಿಗೂ ಬಿ ಫಾರಂ ಕೊಟ್ಟು ಕೈ ತೊಳೆದುಕೊಂಡರು.
ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಜಿಲ್ಲೆಯ ರಾಜಕಾರಣದಲ್ಲಿನ ಆಂತರಿಕ ಬೇಗುದಿ ಹೊರಬರದಂತೆ ಎಚ್ಚರಿಕೆ ವಹಿಸಲಾಗಿತ್ತು. ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ಕೆಂಡ ಕಾರುತ್ತಿದ್ದರು. ಆದರೆ ನೇರವಾಗಿ ಹೆಸರು ಹೇಳದೆ ಕುತೂಹಲ ಹುಟ್ಟುಹಾಕಿದ್ದರು. ಜೂನ್ 4 ರ ನಂತರ ಮಾತನಾಡುತ್ತೇನೆ ಎಂದು ಸೂಚ್ಯವಾಗಿ ಹೇಳಿದರು.
ಈಗ ರಮೇಶ್ ಜಾರಕಿಹೊಳಿ ಅವರ ಬದಲಿಗೆ ಅವರದೇ ಕುಟುಂಬ ಸಹೋದರ ಹಾಗೂ ಪಕ್ಷೇತರ ವಿಧಾನಪರಿಷತ್ ಸದಸ್ಯ ಲಕನ್ ಜಾರಕಿಹೊಳಿ ಮಾತನಾಡಿದ್ದಾರೆ. ತಾವು ಪಕ್ಷೇತರರಾಗಿದ್ದು, ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ ಜಾರಕಿಹೊಳಿ ಅವರನ್ನು ಬೆಳಗಾವಿಯಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ್ ಅವರನ್ನು ಬೆಂಬಲಿಸಿದ್ದಾಗಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಜಾರಕಿಹೊಳಿ ಕುಟುಂಬ ಮತ್ತೆ ಪ್ರಬಲವಾಗಿದೆಯೇ ಎಂಬ ಪ್ರಶ್ನೆಗೆ, ಜನರ ಆಶೀರ್ವಾದ ಇರುವವರೆಗೂ ನಮನ್ನು ಯಾರೂ ಏನೂ ಮಾಡಲಾಗುವುದಿಲ್ಲ ಎಂದು ವಿರೋಧಿ ಬಣಕ್ಕೆ ತಿರುಗೇಟು ನೀಡಿದ್ದಾರೆ.
ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿಯಾಗಬೇಕು ಎಂಬ ಬೇಡಿಕೆಗೆ ಲಕನ್ ಜಾರಕಿಹೊಳಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರಿದ್ದಾರೆ. ಅದನ್ನು ಪರಿಗಣಿಸಿ ಪಕ್ಷದ ವರಿಷ್ಠರು ಸತೀಶ್ ಅವರಿಗೆ ಅವಕಾಶ ನೀಡಬಹುದು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವುದಿಲ್ಲ, ಇನ್ನಷ್ಟು ಮಳೆ ಬೀಳಬಹುದೇ ಹೊರತು ಸರ್ಕಾರ ಬೀಳುವುದಿಲ್ಲ. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಆತೀಯವಾಗಿ ಇದ್ದಾರೆ. ಹೀಗಾಗಿ ಬೆಳಗಾವಿ ರಾಜಕಾರಣ ಸರ್ಕಾರದ ಭವಿಷ್ಯಕ್ಕೆ ಧಕ್ಕೆ ಆಗುವುದಿಲ್ಲ. ಸಿದ್ದರಾಮಯ್ಯ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಬಿಜೆಪಿ ಅಭ್ಯರ್ಥಿಯಾಗಿದ್ದ ಜಗದೀಶ್ ಶೆಟ್ಟರ್ ಸೌಮ್ಯ ಸ್ವಭಾವದವರಾಗಿದ್ದರು. ಅವರ ಒಳ್ಳೆತನ ನೋಡಿ ಜನ ಮತ ಹಾಕಿದ್ದಾರೆ. ಮೃಣಾಲ್ ಹೆಬ್ಬಾಳ್ಕರ್ ಅವರು ಶೆಟ್ಟರ್ ಬಗ್ಗೆ ಅಗೌರವವಾಗಿ ಮಾತನಾಡಿದ್ದಕ್ಕೆ ಸೋಲು ಕಂಡಿದ್ದಾರೆ ಎಂದರು.ಬೆಳಗಾವಿ ರಾಜಕಾರಣದಲ್ಲಿ ಸೇಡಿನ ಪ್ರಶ್ನೆಯಿಲ್ಲ. ಇಲ್ಲಿ ಯಾರಿಗೂ ಅಧಿಕಾರ ಶಾಶ್ವತವಲ್ಲ. ಮುಂದಿನ ನಾಲ್ಕು ವರ್ಷ ಎಲ್ಲರೂ ಒಟ್ಟಾಗಿಯೇ ಕೆಲಸ ಮಾಡಬೇಕು. ಒಳ್ಳೆಯ ಕೆಲಸ ಮಾಡಿದರೆ ಜನ ಪುನರ್ ಆಯ್ಕೆ ಮಾಡುತ್ತಾರೆ. ಇಲ್ಲವಾದರೆ ಸೋಲಿಸಿ ಮನೆಗೆ ಕಳುಹಿಸುತ್ತಾರೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಮತ್ತು ಲಕನ್ ಜಾರಕಿಹೊಳಿ ಸಹೋದರರ ಹೇಳಿಕೆಗಳು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರಕ್ಕೆ ರಮೇಶ್ ಜಾರಕಿಹೊಳಿ ಹಳ್ಳ ತೋಡಿದ್ದರು. ಹೀಗಾಗಿ ಬೆಳಗಾವಿ ಜಿಲ್ಲಾ ರಾಜಕಾರಣ ರಾಜ್ಯಸರ್ಕಾರ ಹಾಗೂ ರಾಜ್ಯ ರಾಜಕಾರಣದ ಮೇಲೆ ಹೆಚ್ಚು ಪ್ರಭಾವಿಯಾಗಿಯೇ ಕಾಣಿಸಿಕೊಳ್ಳುತ್ತದೆ.