ಬೆಂಗಳೂರು,ಜ.1- ಕೆಲವು ಯುವಕ- ಯುವತಿಯರು ಕುಡಿದು ತೂರಾಟ, ಕಿರಿಕ್, ಅವಾಜ್, ಜಗಳ….ಇವು ಕಳೆದ ರಾತ್ರಿ ಬೆಂಗಳೂರು ನಗರದಲ್ಲಿ ಹೊಸವರ್ಷಾಚರಣೆ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು.ಪ್ರಮುಖ ಕೇಂದ್ರ ಬಿಂದುಗಳಾದ ಎಂಜಿ ರೋಡ್, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ಕೋರಮಂಗಲ, ಇಂದಿರಾನಗರ, ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆ ಸೇರಿದಂತೆ ಮುಂತಾದ ಕಡೆಗಳಲ್ಲಿ ಹೊಸವರ್ಷಾಚರಣೆ ವೇಳೆ ಕಂಡು ಬಂದ ನೋಟಗಳು.
ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಯುವಕ-ಯುವತಿಯರು ಕುಣಿದು ಕುಪ್ಪಳಿಸಿ ಪರಸ್ಪರ ಹೊಸವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು.ಯುವತಿಯೊಬ್ಬಳು ಮದ್ಯ ಸೇವಿಸಿದ ಮತ್ತಿನಲ್ಲಿ ಯುವಕರೊಂದಿಗೆ ರಂಪಾಟ ಮಾಡಿಕೊಂಡರೇ ಮತ್ತೊಂದೆಡೆ ಸೆಲ್ಪಿ ತೆಗೆಯಲು ಅವಕಾಶ ಕೊಡುತ್ತಿಲ್ಲ ಎಂದು ಪೊಲೀಸರಿಗೆ ಯುವಕನೊಬ್ಬ ಕುಡಿದ ಅಮಲಿನಲ್ಲಿ ಅವಾಜ್ ಹಾಕಿದ್ದಾನೆ.
ಚರ್ಚ್‌ಸ್ಟ್ರೀಟ್‌ನ ಒಪೆರಾ ಜಂಕ್ಷನ್ ಬಳಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಬಂದೋಬಸ್ತ್‌ನಲ್ಲಿದ್ದ ಪೊಲೀಸರ ಜೊತೆ ಗಲಾಟೆ ಮಾಡಿದ್ದಾನೆ. ಪೊಲೀಸರು ಆತನನ್ನು ಸಮಾಧಾನ ಪಡಿಸಲು ಯತ್ನಿಸಿದಾಗ ಮತ್ತೆ ಕಿರಿಕ್ ಮಾಡಿದ್ದರಿಂದ ಇನ್‌್ಸಪೆಕ್ಟರ್ ಆತನನ್ನು ಎಳೆದು ಹೊರಗೆ ತಂದಿದ್ದಾರೆ.















ಕೋರಮಂಗಲದಲ್ಲಿ ಕುಡಿದು ತೂರಾಡುತ್ತಿದ್ದ ಯುವಕನಿಗೆ ಗಮನಿಸಿದ ಪೊಲೀಸರು ಆತನನ್ನು ಕರೆದೊಯ್ದು ರಸ್ತೆ ಬದಿಗೆ ಕೂರಿಸಿದ್ದು, ಕಂಡು ಬಂದಿತು.ಅದೇ ರೀತಿ ಕುಡಿದ ಮತ್ತಿನಲ್ಲಿ ತೂರಾಡುತ್ತಾ ಕೆಲ ಯುವಕರು ಕೈಯಲ್ಲಿ ಚಪ್ಪಲಿ ಹಿಡಿದು ಮನ ಬಂದಂತೆ ಕುಣಿದಾಡಿದ್ದಾರೆ.
ಪೊಲೀಸ್ ಜೊತೆ ಕಿರಿಕ್:
ಮಧ್ಯರಾತ್ರಿ 1 ಗಂಟೆ ಆಗುತ್ತಿದ್ದಂತೆ ಪೊಲೀಸರೇ ಮುಂದೆ ನಿಂತು ಬಾರ್, ಪಬ್‌ಗಳನ್ನು ಮುಚ್ಚಿಸುತ್ತಿದ್ದಾಗ ಕೆಲವರು ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಪಬ್‌ನಿಂದ ಹೊರ ಬಂದ ಕೆಲ ಯುವತಿಯರು ರಂಪಾಟ ಮಾಡಿಕೊಂಡು ರಸ್ತೆಯಲ್ಲೇ ವಾಂತಿ ಮಾಡಿಕೊಂಡು ನಡೆಯಲು ಸಾಧ್ಯವಾಗದಿದ್ದಾಗ ಕೊನೆಗೆ ಗೆಳೆಯರೇ ಅವರನ್ನು ಎತ್ತಿಕೊಂಡು ಹೋಗುತ್ತಿದ್ದುದು ಕಂಡು ಬಂತು. ಯುವತಿಯರ ರಂಪಾಟದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗುತ್ತಿರುವುದನ್ನು ಗಮನಿಸಿ ಮುಖ ಮುಚ್ಚಿಕೊಂಡು ಮುಂದೆ ಹೋಗಿದ್ದಾರೆ.
ಹೊಸ ವರ್ಷಾಚರಣೆ ಶಾಂತಿಯುತವಾಗಿ ನಡೆದಿದೆ : ಹಿತೇಂದ್ರ
ರಾಜ್ಯದಲ್ಲಿ ಹೊಸ ವರ್ಷಾಚರಣೆ ಶಾಂತಿಯುತವಾಗಿ ನಡೆದಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಹಿತೇಂದ್ರ ಅವರು ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಸುಗಮವಾಗಿ ಹೊಸವರ್ಷವನ್ನು ಆಚರಿಸಲಾಗಿದೆ.
ರಾಜ್ಯದ ಕೆಲವು ಕಡೆ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ.ಪ್ರವಾಸಿತಾಣಗಳು, ಬೀಚ್‌ಗಳು, ದೇವಾಲಯಗಳು, ರೆಸಾರ್ಟ್‌ಗಳಲ್ಲಿ ಬಿಗಿಯಾದ ಪೊಲೀಸ್ ಬಂದೊಬಸ್ತ್ ಮಾಡಲಾಗಿತ್ತು. ಇಂದೂ ಸಹ ಬಂದೊಬಸ್ತ್ ಮುಂದುವರೆದಿದೆ.
