ಬೆಂಗಳೂರು, ಜ.1- ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವದ ಗೊಂದಲಗಳು ಇತ್ಯರ್ಥವಾಗದೆ ಇರುವುದಕ್ಕೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೂ ಬಜೆಟ್ ಪೂರ್ವಭಾವಿ ಸಭೆಗಳನ್ನು ಆರಂಭಿಸದೇ ತಟಸ್ಥವಾಗಿರುವುದಕ್ಕೂ ಹಲವು ಅನುಮಾನಗಳು ಹುಟ್ಟುಕೊಂಡಿವೆ.
ಹಣಕಾಸು ಸಚಿವರಾದಾಗಿನಿಂದಲೂ ಸಿದ್ದರಾಮಯ್ಯ ಪ್ರತಿ ವರ್ಷ ಡಿಸೆಂಬರ್ ವೇಳೆಗಾಗಲೇ ಬಜೆಟ್ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸುವುದು ರೂಢಿ ಸಂಪ್ರದಾಯ. ಆದರೆ ಈ ಬಾರಿ ಹೊಸ ವರ್ಷ ಆರಂಭವಾದರೂ ಈವರೆಗೂ ಬಜೆಟ್ ತಯಾರಿಕೆಯ ತಂಟೆಗೆ ಸಿದ್ದರಾಮಯ್ಯ ಹೋಗಿಲ್ಲ. ಇದು ಹಲವು ಅನುಮಾನಗಳನ್ನು ಮೂಡಿಸಿದೆ. ಇತ್ತೀಚಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಜೆಟ್ ಮಂಡನೆಯ ವೇಳೆಗೆ ನಾಯಕತ್ವದ ಗೊಂದಲದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಯಾರಾದರೂ ಒಬ್ಬರು ಬಜೆಟ್ ಮಂಡಿಸಲೇಬೇಕಿದೆ ಆದರೆ ಅದು ಯಾರು ಎಂಬುದನ್ನು ನಿರ್ದಿಷ್ಟವಾಗಿ ಹೇಳಬೇಕು ಎಂದಿದ್ದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಾವು ಮುಖ್ಯಮಂತ್ರಿಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮೂಲಗಳ ಪ್ರಕಾರ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಡಿ.ಕೆ.ಶಿವಕುಮಾರ್ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಫೆಬ್ರವರಿಯಲ್ಲಿ ರಾಜ್ಯದ ಬಜೆಟ್ ಮಂಡನೆ ಆಗಲಿದೆ. ಅದಕ್ಕಾಗಿ ಡಿಸೆಂಬರ್ ನಿಂದಲೇ ಪೂರ್ವ ತಯಾರಿಗಳು ಚಾಲುಗೊಳ್ಳುತ್ತವೆ. ಪ್ರತಿಯೊಂದು ಇಲಾಖೆಯಲ್ಲೂ ಈವರೆಗೂ ಆಗಿರುವ ವೆಚ್ಚ ಮತ್ತು ಖರ್ಚಾಗದೆ ಉಳಿದ ಅನುದಾನದ ಬಗ್ಗೆ ಆರ್ಥಿಕ ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಜನವರಿಯಲ್ಲಿ ನಡೆಯುವ ಸಭೆಗಳಲ್ಲಿ ಇಲಾಖಾವಾರು ಹೊಸ ಘೋಷಣೆಗಳ ಬಗ್ಗೆ ಪ್ರಸ್ತಾವನೆ ಪಡೆದುಕೊಳ್ಳುತ್ತಿದ್ದರು. ಅನಂತರ ವಿವಿಧ ಸಂಘ-ಸಂಸ್ಥೆಗಳ ಜೊತೆ ಚರ್ಚೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಸಿದ್ದರಾಮಯ್ಯ ಯಾವುದೇ ಪೂರ್ವಭಾವಿ ಸಭೆಗಳಲ್ಲಿ ತೊಡಗಿಸಿಕೊಳ್ಳದೆ ತಮ ಪಾಡಿಗೆ ತಾವೀದ್ದಾರೆ.
ಇತ್ತೀಚಿಗೆ ಕೇರಳಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಅದರ ನಡುವೆಯೂ ಸಿದ್ದರಾಮಯ್ಯ ಇನ್ನು ಬಜೆಟ್ ಪೂರ್ವಭಾವಿ ಸಭೆಗಳನ್ನು ಆರಂಭಿಸಿಲ್ಲ. ಈಗಾಗಲೇ 16 ಬಜೆಟ್ ಗಳನ್ನು ಮಂಡಿಸಿ 17ನೇ ಬಜೆಟ್ ಮೂಲಕ ಹೊಸ ದಾಖಲೆ ಬರೆಯಲು ಸಿದ್ದರಾಮಯ್ಯ ಮುಂದಾಗಿದ್ದರು. ಈ ಹಂತದಲ್ಲಿ ನಾಯಕತ್ವದ ಗೊಂದಲಗಳು ಪರಿಸ್ಥಿತಿಯನ್ನು ಅಯ್ಯೋಮಯ ಮಾಡಿವೆ.
ಮುಂದಿನ ಬಜೆಟ್ ಮಂಡಿಸುವವರು ಯಾರು ಎಂಬುದೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವಾರು ಕಾಂಗ್ರೆಸ್ ನಾಯಕರ ಬಳಿಯು ಇದೇ ವಿಚಾರವಾಗಿ ಚರ್ಚೆಯಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ನಿರ್ದಿಷ್ಟವಾದ ನಿರ್ಧಾರಗಳು ಇನ್ನೂ ಹೊರ ಬಿದ್ದಿಲ್ಲ. ಐದು ವರ್ಷ ತಾವೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಇತ್ತೀಚಿಗೆ ತಮ ನಿಲುವನ್ನು ಬದಲಾಯಿಸಿದ್ದಾರೆ. ಪಕ್ಷದ ಹೈಕಮಾಂಡ್ ಸೂಚನೆ ನೀಡಿದರೆ ತಾವು ಮುಖ್ಯಮಂತ್ರಿಯಾಗಿ ಮುಂದುವರೆಯುವುದಾಗಿ ವರಸೆ ಬದಲಾಯಿಸಿದ್ದಾರೆ. ಎರಡು ಉಪಹಾರ ಕೂಟಗಳ ಬಳಿಕ ಡಿಕೆ ಶಿವಕುಮಾರ್ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ನಾಯಕತ್ವದ ವಿವಾದವನ್ನು ಹೈಕಮಾಂಡ್ ಸೃಷ್ಟಿಸಿಲ್ಲ. ರಾಜ್ಯ ನಾಯಕರು ತಮಷ್ಟಕ್ಕೆ ತಾವೇ ಗೊಂದಲ ಮಾಡಿಕೊಂಡಿದ್ದಾರೆ. ಈ ವಿವಾದವನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದರು. ಆ ಬಳಿಕ ಭುಗಿಲೆದ್ದಿದ್ದ ಚರ್ಚೆಗಳು ಸದ್ದಡಗಿದ್ದವು.
ನಾಯಕತ್ವದ ಗೊಂದಲ ನಿವಾರಣೆಯಾಗಿದೆ ಎಂದು ಭಾವಿಸುವ ಹೊತ್ತಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್, ಡಿಸೆಂಬರ್ 6 ಅಥವಾ 9ರಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ನೂರಕ್ಕೆ ಇನ್ನೂರಷ್ಟು ಖಚಿತ ಎಂದು ಹೇಳುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಬಣದ ಉತ್ಸಾಹ ನೋಡಿದರೆ ನಾಯಕತ್ವದ ಕುರಿತ ಗೊಂದಲಗಳ ಬಗ್ಗೆ ಮತ್ತಷ್ಟು ಚರ್ಚೆಗಳು ಹುಟ್ಟಿಕೊಳ್ಳುತ್ತಿವೆ. ಅದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಅವರು ಬಜೆಟ್ ತಯಾರಿ ಮಾಡದೆ ತಟಸ್ಥವಾಗಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಆರ್ಥಿಕ ಇಲಾಖೆಯಲ್ಲಿ ಹೆಚ್ಚು ಅನುಭವಿಯಾಗಿರುವ ಸಿದ್ದರಾಮಯ್ಯ ಅವರು ಈ ಬಾರಿ ಎರಡು ತಿಂಗಳಿಗೂ ಮೊದಲೇ ಬಜೆಟ್ ಪೂರ್ವಭಾವಿ ಸಭೆಗಳನ್ನು ಆರಂಭಿಸುವ ಅಗತ್ಯ ಇಲ್ಲ ಎಂದು ಭಾವಿಸಿರುವ ಸಾಧ್ಯತೆಯೂ ಇದೆ. ಆದರೆ ನಾಯಕತ್ವದ ಗೊಂದಲ ವಿಚಾರವಾಗಿ ಹೈಕಮಾಂಡ್ ಸ್ಪಷ್ಟ ನಿರ್ದೇಶನ ನೀಡದೇ ಇರುವುದು ಅನುಮಾನಗಳನ್ನು ಹೆಚ್ಚಿಸಿದೆ.
