ಬೆಂಗಳೂರು, ಜ.1- ಬಿಬಿಎಂಪಿ ಗ್ರೇಟರ್ ಬೆಂಗಳೂರಾಗಿ ಬದಲಾಗುತ್ತಿದ್ದಂತೆ ಅದರ ಹಣಕಾಸಿನ ಸ್ಥಿತಿ ಅಧೋಗತಿಗೆ ಇಳಿದಿದೆ. ಜಿಬಿಎ ಬಳಿ ಪ್ರತಿವರ್ಷದಂತೆ ಕ್ಯಾಲೆಂಡರ್, ಡೈರಿ ಮುದ್ರಣ ಮಾಡಲು ಹಾಗೂ ಸಣ್ಣಪುಟ್ಟ ಖರ್ಚು ವೆಚ್ಚಗಳಿಗೂ ಹಣ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ ಅವಧಿಯಲ್ಲಿ ಪ್ರತಿ ವರ್ಷ ಕ್ಯಾಲೆಂಡರ್, ಡೈರಿ ಮುದ್ರಣ ಮಾಡಿ ಹಂಚಿಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕ್ಯಾಲೆಂಡರ್, ಡೈರಿ ಮುದ್ರಣ ಮಾಡುವುದಕ್ಕೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಚಿಂತನೆ ಮಾಡುವಂತಾಗಿದೆ.
ಕ್ಯಾಲೆಂಡರ್, ಡೈರಿ ಮುದ್ರಣ ಮಾಡೋದು ಇರಲಿ ಕೆಲವು ಕಚೇರಿಗಳಲ್ಲಿ ಕಾಫಿ, ಟಿ ಗೂ ಹಣವಿಲ್ಲದಂತಾಗಿದೆ.
ಅಷ್ಟೇ ಅಲ್ಲ, ಜಿಬಿಎ ಮುಖ್ಯ ಆಯುಕ್ತರು ಹಾಗೂ ಸಹಾಯವಾಣಿ ಕೇಂದ್ರ ಹೊರತು ಪಡಿಸಿ ಉಳಿದ ಎಲ್ಲರ ಕಚೇರಿಗಳಲ್ಲಿರುವ ಟಿವಿಗಳಿಗೆ ಕೇಬಲ್ ಸಂಪರ್ಕ ಕಡಿತಗೊಳಿಸಲಾಗಿದೆ.ಜಿಬಿಎ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿ, ಮುಖ್ಯ ಆಯುಕ್ತರ ಕಚೇರಿ ಹಾಗೂ ಸಹಾಯವಾಣಿ ಕೇಂದ್ರಕ್ಕೆ ಮಾತ್ರ ದಿನಪತ್ರಿಕೆ ಪೂರೈಕೆ ಮಾಡಲಾಗುತ್ತಿದ್ದು, ಉಳಿದ ಎಲ್ಲ ಕಚೇರಿಗಳಿಗೆ ದಿನಪತ್ರಿಕೆಯನ್ನೂ ಸ್ಥಗಿತಗೊಳಿಸಲಾಗಿದೆ.
ಇನ್ನೂ ಪ್ರಾಣಿಗಳ ರಕ್ಷಣೆಗೆ ಇರುವ ಕೆಲವು ವಾಹನಗಳಿಗೆ ಕಳೆದ ನಾಲ್ಕು ತಿಂಗಳಿನಿಂದ ಇಂಧನ ವೆಚ್ಚ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ.ಬಿಬಿಎಂಪಿಯಿಂದ ಜಿಬಿಎ ಆದ ನಂತರ 5 ನಗರ ಪಾಲಿಕೆಗಳ ಆರ್ಥಿಕ ಪರಿಸ್ಥಿತಿ ಕುಸಿದು ಬಿದ್ದಿದೆ. ಇತ್ತಿಚೆಗೆ ಪಶ್ಚಿಮ ನಗರ ಪಾಲಿಕೆಯ ಆಯುಕ್ತರು ಬರುವ ಆದಾಯದಲ್ಲಿ ಪಾಲಿಕೆ ನಡೆಸಲು ಸಾಧ್ಯವಿಲ್ಲ ಎಂದು ತಮ ಅಸಮಾಧಾನ ತೋಡಿಕೊಂಡಿದ್ದರು.
ಅವರ ಈ ಹೇಳಿಕೆ ಐದು ನಗರ ಪಾಲಿಕೆ ಆರ್ಥಿಕ ಪರಿಸ್ಥಿತಿಗಳಿಗೆ ಹಿಡಿದ ಕೈ ಗನ್ನಡಿಯಾಗಿದೆ ಸರ್ ಕೆಲವು ಸಿಬ್ಬಂದಿಗಳಿಗೆ ಸಕಾಲಕ್ಕೆ ಸಂಬಳ ಆಗುತ್ತಿಲ್ಲ. ಇಂತ ಪರಿಸ್ಥಿತಿಗೆ ತಂದಿಡಲೆಂದೇ ಜಿಬಿಎ ರಚನೆ ಮಾಡುವಂತಹ ಘನಂದಾರಿ ಕೆಲಸಕ್ಕೆ ಕೈ ಹಾಕಲಾಯಿತೇ ಎಂದು ಜಿಬಿಎ ಸಿಬ್ಬಂದಿಗಳು ತಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.
