Monday, November 25, 2024
Homeರಾಜಕೀಯ | Politicsಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಚದುರಂಗದಾಟ ಶುರು

ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಚದುರಂಗದಾಟ ಶುರು

ಬೆಂಗಳೂರು,ಜೂ.19- ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ತಮ್ಮ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕಾರಗೊಂಡ ಬೆನ್ನಲ್ಲೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕ್ಷೇತ್ರದ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ನೆಪದಲ್ಲಿ ಜನರ ನಾಡಿಮಿಡಿತ ಅರಿಯುತ್ತಿದ್ದಾರೆ. ಉಪಚುನಾವಣೆಯಲ್ಲಿ ಯಾರನ್ನು ಸ್ಪರ್ಧೆಗಿಳಿಸಿದರೆ ಗೆಲುವು ಸಾಧ್ಯ ಎಂಬ ಬಗ್ಗೆ ಜನರ ಅಭಿಪ್ರಾಯವನ್ನು ಕಲೆ ಹಾಕುತ್ತಿದ್ದಾರೆ.

ಜೆಡಿಎಸ್‌‍ ಕೂಡ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದೆ. ಹೀಗಾಗಿ ಬಿಜೆಪಿ, ಜೆಡಿಎಸ್‌‍ನಲ್ಲಿ ಈ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಪೈಪೋಟಿ ಏರ್ಪಟ್ಟಿದೆ. ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ನೀಡಲಾಗುತ್ತದೆ ಎಂಬ ಸುಳಿವನ್ನು ಇನ್ನೂ 2 ಮೈತ್ರಿ ಪಕ್ಷಗಳು ಬಿಟ್ಟುಕೊಟ್ಟಿಲ್ಲ.

ಆದರೆ ಜೆಡಿಎಸ್‌‍ ಯುವಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಅಲ್ಲದೆ, ಚನ್ನಪಟ್ಟಣ ತಾಲ್ಲೂಕು ಜೆಡಿಎಸ್‌‍ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಸಿ.ಜಯಮುತ್ತು ಅವರಿಗೆ ಟಿಕೆಟ್‌ ನೀಡಬೇಕೆಂಬ ಒತ್ತಡವನ್ನು ಅವರ ಅಭಿಮಾನಿಗಳು ಕುಮಾರಸ್ವಾಮಿಯವರಿಗೆ ತರುತ್ತಿದ್ದಾರೆ.ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಜಯಮುತ್ತು ಅವರ ಅಭಿಮಾನಿಗಳು ಪೋಸ್ಟ್‌ ಹಾಕಿ ಉಪಚುನಾವಣೆಗೆ ತಮ ನಾಯಕನಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಪ್ರಸ್ತುತ ವಿಧಾನಪರಿಷತ್‌ ಸದಸ್ಯರಾಗಿದ್ದು, ಉಪಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ಜೆಡಿಎಸ್‌‍ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆಯನ್ನು ನಡೆಸಿದ್ದಾರೆ.

ಚುನಾವಣೆ ಘೋಷಣೆಯಾದ ನಂತರ ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದು, ಸದ್ಯಕ್ಕೆ ಉಪಚುನಾವಣೆಯ ಮೈತ್ರಿ ಅಭ್ಯರ್ಥಿ ಯಾರೆಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ನಡುವೆ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌‍ ಪ್ರತಿನಿಧಿಸಬೇಕು ಎಂಬ ವಾದವು ಬಲವಾಗಿದ್ದು, ಯೋಗೀಶ್ವರ್‌ ಸ್ಪರ್ಧೆ ಮಾಡುವುದಾದರೆ ಬಿಜೆಪಿ ಬದಲಾಗಿ ಜೆಡಿಎಸ್‌‍ ಚಿಹ್ನೆಯಡಿ ಸ್ಪರ್ಧಿಸಲಿ ಎಂಬ ಸಲಹೆಯನ್ನು ನೀಡಲಾಗಿದೆ.

ಇದರ ಬಗ್ಗೆ ಯೋಗೇಶ್ವರ್‌ ಜೊತೆ ಸಮಾಲೋಚನೆ ನಡೆಸಿ ಅಂತಿಮ ರೂಪ ನೀಡಲು ಮಾಜಿ ಶಾಸಕ ಎ.ಮಂಜು ಅವರಿಗೆ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಎನ್‌ಡಿಎ ಮೈತ್ರಿಕೂಟದಲ್ಲಿ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತ ಯಾವುದೇ ಸಭೆಗಳೂ ಅಧಿಕೃತವಾಗಿ ನಡೆದಿಲ್ಲ. ಆದರೆ ಮಾಜಿ ಸಂಸದ ಡಿ.ಕೆ.ಸುರೇಶ್‌ ತಾವು ಉಪಚುನಾವಣೆಯಲ್ಲಿ ಸ್ಪಧಿಸುವುದಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. ಆದರೂ ಡಿ.ಕೆ.ಶಿವಕುಮಾರ್‌ರವರು ಕ್ಷೇತ್ರದ್ಯಂತ ಪ್ರವಾಸ ಕೈಗೊಂಡು, ಜನರ ನಾಡಿಮಿಡಿತ ಅರಿಯುವ ಕಾರ್ಯ ಮಾಡುತ್ತಿರುವುದು ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌‍ಗೆ ಅನುಕೂಲಕರವಾದ ವಾತಾವರಣ ಕಂಡುಬಂದು ವಿಶ್ವಾಸ ದೊರೆಯುವುದು ಖಾತ್ರಿಯಾದರೆ ಸುರೇಶ್‌ ಅವರನ್ನೇ ಉಪಚುನಾವಣೆ ಅಭ್ಯರ್ಥಿ ಮಾಡಲಾಗುತ್ತದೆ ಎಂಬ ವಿಚಾರವು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

RELATED ARTICLES

Latest News