ಬೆಂಗಳೂರು, ಜು.4- ರಾಜ್ಯ ಸಂಚಾರಿ ಪೊಲೀಸರು ಇದೀಗ ವಾಹನಗಳಲ್ಲಿ ಕಣ್ಣು ಕುಕ್ಕುವಂತಹ ಎಲ್ಇಡಿ ಲೈಟ್ಗಳನ್ನು ಅಳವಡಿಸಿ ಕೊಂಡು ಇತರರಿಗೆ ತೊಂದರೆ ಉಂಟು ಮಾಡುವರ ವಿರುದ್ಧ ಬಿಸಿ ಮುಟ್ಟಿಸಿದ್ದು, ಈವರೆಗೆ 1518 ಪ್ರಕರಣಗಳು ದಾಖಲಾಗಿವೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಮಹಾಪೊಲೀಸ್ ನಿರ್ದೇಶಕರಾದ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಅವರು ಎಕ್‌್ಸನಲ್ಲಿ ಪ್ರಕಟಿಸಿದ್ದು, ಜುಲೈ ತಿಂಗಳಿನಿಂದ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಎಲ್ಇಡಿ ಲೈಟ್ ಅಳವಡಿಸಿ ಕೊಳ್ಳುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು:
ವಾಹನಗಳಿಗೆ ತೀಕ್ಷ್ಣ ಬೆಳಕು ಬಿಂಬಿಸುವಂತಹ ಎಲ್ಇಡಿ ಲೈಟ್ಗಳನ್ನು ಅಳವಡಿಸಿದ ಅತಿ ಹೆಚ್ಚು ಪ್ರಕರಣಗಳು ನಗರದಲ್ಲಿ ವರದಿಯಾಗಿವೆ. ಈ ಬಗ್ಗೆ 686 ಪ್ರಕರಣಗಳು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.ನಂತರದ ಸ್ಥಾನದಲ್ಲಿ ಮಂಗಳೂರು ನಗರ 96 ಪ್ರಕರಣ, ರಾಯಚೂರು 93 ಪ್ರಕರಣಗಳು ದಾಖಲಾಗಿದ್ದು, ಕೊಪ್ಪಳ, ಕೆಜಿಎಫ್, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ನಿನ್ನೆ ಸುಮಾರು 287 ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, 100ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲು ಮಾಡಿಕೊಂಡು 57,500 ದಂಡ ಸಂಗ್ರಹ ಮಾಡಲಾಗಿದೆ ಎಂದು ಪೂರ್ವ ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್.ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಸ್ತೆ ಅಪಘಾತಗಳು ಮತ್ತು ಅದರಿಂದಾಗಿ ಸಾವು- ನೋವುಗಳನ್ನು ತಪ್ಪಿಸಲು ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿ ಅನುಮತಿಸಲಾದ ಲೈಟ್ಗಳನ್ನು ಮಾತ್ರ ವಾಹನಗಳಲ್ಲಿ ಅಳವಡಿಸಬೇಕೆಂದು ರಾಜ್ಯ ಸರ್ಕಾರ ಕಳೆದ ತಿಂಗಳು ಆದೇಶ ಹೊರಡಿಸಿತ್ತು.
ವಾಹನಗಳಲ್ಲಿ ಕಣ್ಣು ಕುಕ್ಕುವಂತಹ ಲೈಟ್ಗಳನ್ನು ಬಳಸುತ್ತಿದ್ದರೆ, ಅಪಘಾತಗಳಿಗೆ ಕಾರಣವಾಗುತ್ತದೆ. ಅಲ್ಲದೆ, ಇತರೇ ಚಾಲಕರಿಗೆ ತೊಂದರೆ ಉಂಟಾಗುತ್ತದೆ.ಹಾಗಾಗಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.ಹೀಗಾಗಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಲೋಕ್ ಕುಮಾರ್ ಅವರು ಎಚ್ಚರಿಸಿದ್ದಾರೆ.
ಕೇಂದ್ರ ಮೋಟಾರ್ ವಾಹನ ಕಾಯ್ದೆ ಉಲ್ಲಂಘಿಸಿ ತೀಕ್ಷ್ಣ ಬೆಳಕು ಸೂಸುವ ಎಲ್ಇಡಿ ಲೈಟ್ ಅಳವಡಿಸಿದ್ದ ಬಗ್ಗೆ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅವರು ವಂದನೆ ಸಲ್ಲಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ : 184 ಪ್ರಕರಣ- 90700 ರೂ. ದಂಡ ಸಂಗ್ರಹ
ಬೆಂಗಳೂರು, ಜು.4- ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.ಪ್ರಮುಖವಾಗಿ ದ್ವಿಚಕ್ರ ವಾಹನಗಳಲ್ಲಿ ಹೆಚ್ಚು ಅಪಘಾತವಾಗುತ್ತಿರುವುದರಿಂದ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು 184 ಪ್ರಕರಣಗಳನ್ನು ದಾಖಲಿಸಿ 90,700 ರೂ. ದಂಡ ವಸೂಲಿ ಮಾಡಿದ್ದಾರೆ.
ಏಕಮುಖ ಸಂಚಾರಕ್ಕೆ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿದ 55 ಪ್ರಕರಣದಲ್ಲಿ 27,600 ರೂ. ದಂಡ ವಸೂಲಿ ಮಾಡಲಾಗಿದ್ದು, ತಪ್ಪು ನಿಲುಗಡೆ 69 ಪ್ರಕರಣ- 37,800 ರೂ. ದಂಡ, ಟಾತ್ ಪಾರ್ಕಿಂಗ್ ವಾಹನ ಚಾಲನೆ 6 ಪ್ರಕರಣ- 5000 ರೂ. ದಂಡ. ಟ್ಪಾತ್ ರೈಡಿಂಗ್ 9 ಪ್ರಕರಣ- 5 ಸಾವಿರ ದಂಡ, ಮೊಬೈಲ್ ಬಳಸಿ ವಾಹನ ಚಾಲನೆ 7 ಪ್ರಕರಣ -10 ಸಾವಿರ ದಂಡ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ 511 ಪ್ರಕರಣ- 2.51 ಲಕ್ಷ ದಂಡ, ತ್ರಿಬಲ್ ರೈಡಿಂಗ್ 10 ಪ್ರಕರಣ-6 ಸಾವಿರ ದಂಡ ಹಾಗೂ ಇತರೆ ಸಂಚಾರಿ ನಿಯಮ ಉಲ್ಲಂಸಿದ 184 ಪ್ರಕರಣದಲ್ಲಿ 90700 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪಶ್ಚಿಮ ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತರಾದ ಅನಿತಾ ಬಿ.ಹದ್ದಣ್ಣನವರ್ ತಿಳಿಸಿದ್ದಾರೆ.
ಸುಮಾರು 851 ಪ್ರಕರಣಗಳಲ್ಲಿ ಒಟ್ಟು 4,33,600 ರೂ. ದಂಡ ಸಂಗ್ರಹಿಸಲಾಗಿದೆ. ಜೊತೆಗೆ ಎಲ್ಲ ವಾಹನ ಚಾಲಕರು, ಸವಾರರು ಕಡ್ಡಾಯವಾಗಿ ಸಂಚಾರ ನಿಯಮ ಗಳನ್ನು ಪಾಲಿಸುವಂತೆ ಹಾಗೂ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಮುಂದಿನ ದಿನಗಳಲ್ಲಿಯೂ ಸಹ ವಿಶೇಷ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೈಬೀಮ್ಲೈಟ್:
ಇತ್ತೀಚಿನ ದಿನಗಳಲ್ಲಿ ಕೆಲವು ವಾಹನಗಳಲ್ಲಿ ಹೈಬೀಮ್ ಲೈಟ್ ಉಪಯೋಗಿಸುತ್ತಿದ್ದು, ಅಂತಹ ವಾಹನಗಳ ಸವಾರರ ವಿರುದ್ಧ 77 ಪ್ರಕರಣಗಳನ್ನು ದಾಖಲಿಸಿ 38500 ರೂ. ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ.
ಹೈಬೀಮ್ಲೈಟ್ ಉಪಯೋ ಗಿಸುವುದರಿಂದ ರಾತ್ರಿ ಸಮಯದಲ್ಲಿ ರಸ್ತೆ ಅಪಘಾತಗಳು ಉಂಟಾಗುವ ಸಂಭವವಿರುತ್ತದೆ. ಹಾಗಾಗಿ ಪಶ್ಚಿಮ ವಿಭಾಗದ ಎಲ್ಲ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಚರಣೆ ಕೈಗೊಳ್ಳಲಾಗಿದೆ. ಎಲ್ಲಾ ವಾಹನ ಚಾಲಕರು ಹಾಗೂ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಅರಿವು ಮೂಡಿಸಿಕೊಂಡು ನಿಯಮಗಳನ್ನು ಪಾಲಿಸುವಂತೆ ಡಿಸಿಪಿ ಅವರು ಮನವಿ ಮಾಡಿದ್ದಾರೆ.