ಬೆಂಗಳೂರು,ಜ.4- ಬಳ್ಳಾರಿ ಗಲಭೆಗೆ ಕಾರಣಕರ್ತರಾದ ಶಾಸಕ ನಾರಾ ಭರತ್‌ರೆಡ್ಡಿಯನ್ನು ದ್ವೇಷಭಾಷಣ ಕಾಯ್ದೆಯಡಿ ಬಂಧಿಸಿ ಸರ್ಕಾರ ಜೈಲಿಗೆ ಏಕೆ ಹಾಕಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಾಜ್ಯಸರ್ಕಾರ ವಿಧಾನಮಂಡಲದ ಉಭಯಸದನಗಳಲ್ಲಿ ಅಂಗೀಕರಿಸಿರುವ ಕರ್ನಾಟಕ ದ್ವೇಷಭಾಷಣ ನಿಯಂತ್ರಣ ಕಾಯ್ದೆಯಡಿ ಬಂಧಿಸುವುದಾದರೆ ಮೊದಲು ನಾರಾ ಭರತ್‌ರೆಡ್ಡಿ ಆಪ್ತ ಸತೀಶ್‌ರೆಡ್ಡಿ ಹಾಗೂ ಅವರ ಬೆಂಬಲಿಗರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಸರ್ಕಾರ ಈ ಪ್ರಕರಣದಲ್ಲಿ ಯಾರನ್ನು ರಕ್ಷಣೆ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದ್ವೇಷಭಾಷಣ ವಿಧೇಯಕ ಬಿಜೆಪಿಯವರನ್ನು ಗುರಿಯಾಗಿಟ್ಟುಕೊಂಡು ಜಾರಿ ಮಾಡಲು ಸರ್ಕಾರ ಹೊರಟಿದೆ. ನಾವು ಮಾತನಾಡಿದರೆ ದ್ವೇಷಭಾಷಣ. ಹಾಗಾದರೆ ಕಾಂಗ್ರೆಸ್ ಶಾಸಕ ಬಳ್ಳಾರಿಗೆ ಬೆಂಕಿ ಹಚ್ಚುತ್ತೇನೆಂದು ಹೇಳುತ್ತಿರುವುದು ಶಾಂತಿ ಸಂದೇಶವೇ ಎಂದು ತರಾಟೆಗೆ ತೆಗೆದುಕೊಂಡರು.
ನಮ ಗೃಹಸಚಿವರಾದ ಡಾ.ಜಿ.ಪರಮೇಶ್ವರ್‌ರವರಿಗೆ ಬೇರೆ ಯಾವುದೇ ವಿಚಾರಗಳೂ ಗೊತ್ತಿರುವುದಿಲ್ಲ. ಏನೇ ಕೇಳಿದರೂ ಗೊತ್ತಿಲ್ಲ ಎಂದು ಸಿದ್ಧಪಡಿಸಿದ ಉತ್ತರ ಕೊಡುತ್ತಾರೆ. ಆದರೆ ಬಳ್ಳಾರಿ ಎಸ್ಪಿ ಘಟನೆ ನಡೆದ ದಿನ ಕುಡಿದು ಮಲಗಿದ್ದರು ಎಂದು ಇವರಿಗೆ ಯಾರು ಹೇಳಿದ್ದರು? ಎಂದು ಪ್ರಶ್ನಿಸಿದರು.
ನಾರಾ ಭರತ್‌ರೆಡ್ಡಿಗೆ ಎಷ್ಟು ದುರಹಂಕಾರ ಎಂದರೆ ಇಡೀ ಬಳ್ಳಾರಿಗೇ ಬೆಂಕಿ ಹಚ್ಚುತ್ತೇನೆ ಎಂದು ಹೇಳುತ್ತಾರೆ. ಚಿಕ್ಕ ವಯಸ್ಸು, ರಾಜಕೀಯದಲ್ಲಿ ಬೆಳೆಯಲು ಇನ್ನೂ ಅವಕಾಶವಿತ್ತು. ಇಂತಹ ದುರಹಂಕಾರಿಗಳಿಗೆ ಸರ್ಕಾರ ಸರಿಯಾದ ಪಾಠ ಕಲಿಸಬೇಕೆಂದು ಒತ್ತಾಯಿಸಿದರು.
ಬಳ್ಳಾರಿಯಲ್ಲಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಒಬ್ಬ ಐಪಿಎಸ್ ಅಧಿಕಾರಿಗೆ ಸೌಜನ್ಯಕ್ಕಾದರೂ ನೋಟೀಸ್ ಕೊಡದೇ ನಿರ್ದಾಕ್ಷಿಣ್ಯವಾಗಿ ಸೇವೆಯಿಂದ ಅಮಾನತು ಮಾಡುತ್ತಾರೆಂದರೆ ಈ ಸರ್ಕಾರಕ್ಕೆ ಏನು ಹೇಳಬೇಕು. ಯಾವುದಾದರೂ ಅಧಿಕಾರಿ ಅಧಿಕಾರ ಸ್ವೀಕರಿಸಿದ ಮೊದಲ ದಿನ ಕುಡಿದು ಮಲಗುತ್ತಾರಾ?, ಇಡೀ ಘಟನೆಯನ್ನು ಸರ್ಕಾರ ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಹೊರಟಿದೆ. ತಮವರನ್ನು ರಕ್ಷಿಸಿಕೊಳ್ಳಲು ಅಧಿಕಾರಿಗಳನ್ನು ಹರಕೆ ಕುರಿ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
ನಿಜ ಹೇಳಬೇಕೆಂದರೆ ಘಟನಾ ಸ್ಥಳದಲ್ಲಿ ಪವನ್ ನೆಜ್ಜೂರ್ ಇದ್ದರು. ಅವರು ಪರಿಸ್ಥಿತಿಯನ್ನು ನಿಯಂತ್ರಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು, ಶಾಸಕರು, ಸಚಿವರುದೂರವಾಣಿ ಕರೆಗಳನ್ನು ಸ್ವೀಕಾರ ಮಾಡಲು ಸಾಧ್ಯವಾಗಿರಲಿಲ್ಲ. ಗಲಭೆ ನಿಯಂತ್ರಿಸಬೇಕೋ ಅಥವಾ ಇವರ ಜೊತೆ ಮಾತನಾಡಬೇಕಿತ್ತಾ?, ಇದೇ ಕಾರಣಕ್ಕಾಗಿ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದೀರಾ?, ಎಲ್ಲಾ ಅಧಿಕಾರಿಗಳನ್ನೂ ಮಾನಸಿಕವಾಗಿ ಕುಗ್ಗಿಸುತ್ತಾ ಹೋದರೆ ಕರ್ತವ್ಯ ನಿರ್ವಹಿಸುವವರು ಯಾರು? ಎಂದು ಸಿಡಿಮಿಡಿಗೊಂಡರು.
ಜನಾರ್ದನರೆಡ್ಡಿ ಬಳ್ಳಾರಿಗೆ ಬಂದ ಮೇಲೆ ಗಲಭೆ ನಡೆದಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೂ ತಿರುಗೇಟು ಕೊಟ್ಟ ಶೋಭಾ ಕರಂದ್ಲಾಜೆ, ಮೊನ್ನೆ ನಡೆದ ಗಲಭೆಯನ್ನು ಯಾರು ನಡೆಸಿದ್ದಾರೆ?, ಇದನ್ನು ಮಾಡಿಸಿದವರು ಕಾಂಗ್ರೆಸ್ ಶಾಸಕ ತಾನೇ?, ಅವರ ಮೇಲೆ ನೀವು ಏಕೆ ಕ್ರಮ ಜರುಗಿಸಿಲ್ಲ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದರು.
ಪವನ್ ನೆಜ್ಜೂರ್ ಮಾಡಿರುವ ತಪ್ಪಾದರೂ ಏನು?, ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಬ್ಯಾನರ್ ಕಟ್ಟುವ ವಿಷಯದಲ್ಲಿ ಎರಡು ಗುಂಪುಗಳ ನಡುವೆ ಗಲಭೆ, ಕಲ್ಲು ತೂರಾಟ ನಡೆದಿದೆ. ಶಾಸಕರ ಆಪ್ತ ಜನಾರ್ದನರೆಡ್ಡಿ ಮನೆ ಮುಂದೆ ಕುರ್ಚಿ ಹಾಕಿಕೊಂಡು ಬ್ಯಾನರ್ ಹಾಕಿಸುವ ಅಗತ್ಯವಾದರೂ ಏನಿತ್ತು?, ಇದು ಪೂರ್ವನಿಯೋಜಿತ ಕೃತ್ಯವಲ್ಲವೇ? ಎಂದು ಕಿಡಿಕಾರಿದರು.
ಸತೀಶ್ ರೆಡ್ಡಿ ಅವರ ಖಾಸಗಿ ಅಂಗರಕ್ಷಕನೇ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿಸಿದ್ದಾರೆ. ಹಾಗಾದರೆ ಈವರೆಗೂ ಅವರನ್ನು ಏಕೆ ಬಂಧಿಸಿಲ್ಲ?, ಇವರನ್ನು ಸರ್ಕಾರ ಬಂಧಿಸದೆಯೇ ರಕ್ಷಣೆ ಮಾಡುತ್ತಿದೆಯೇ?, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರತ್ ರೆಡ್ಡಿಯನ್ನು ಭೇಟಿ ಮಾಡಿ ಏನು ಮಾತುಕತೆ ನಡೆಸಿದರು?, ನಿಮ ಅಧಿಕಾರವಧಿಯಲ್ಲಿ ಇನ್ನೂ ಎಷ್ಟು ಅಧಿಕಾರಿಗಳು ಬಲಿಯಾಗಬೇಕು? ಎಂದು ಆಕ್ರೋಶ ಹೊರಹಾಕಿದರು.
ಪವನ್ ನೆಜ್ಜೂರ್ ಆತಹತ್ಯೆಗೆ ಯತ್ನಿಸಿದ್ದು ನಿಜ. ಅವರ ತಂದೆಯ ಮೇಲೆ ಸರ್ಕಾರ ಒತ್ತಡ ಹಾಕಿ ಡೆತ್‌ನೋಟ್ ಮುಚ್ಚಿ ಹಾಕಿಸಿದೆ. ಅದರಲ್ಲಿ ನನ್ನ ಮೇಲೆ ಯಾವ ಅಧಿಕಾರಿಗಳು ಒತ್ತಡ ಹಾಕಿದರು ಎಂಬುದನ್ನು ಅವರು ಬರೆದಿಟ್ಟಿದ್ದರು. ಇದನ್ನು ಸರ್ಕಾರ ಮುಚ್ಚಿಡುತ್ತಿರುವ ಉದ್ದೇಶವಾದರೂ ಏನು?, ಹಿರಿಯ ಅಧಿಕಾರಿಗಳು ತುಮಕೂರಿಗೆ ಹೋಗಲು ಕಾರಣವಾದರೂ ಏನು?, ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
