ಬೆಂಗಳೂರು,ಜು.9-ಹೆಚ್ಚುತ್ತಿರುವ ಅನಕ್ಷರತೆ, ಕುಟುಂಬ ಸದಸ್ಯರ ಒತ್ತಡ, ಏಕಪೋಷಕತ್ವ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಗಂಡು ಸಂತಾನ ಬೇಕೆಂಬ ಹೆಬ್ಬಯಕೆ, ಪ್ರೇಮ ಪ್ರಕರಣ ಇತರೆ ಕಾರಣಗಳಿಂದ ರಾಜ್ಯದಲ್ಲಿ ಬಾಲ ಗರ್ಭಿಣಿ ಪ್ರಕರಣಗಳು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಒಟ್ಟು 13,447 ಬಾಲ ಗರ್ಭಿಣಿ ಪ್ರಕರಣ ದಾಖಲಾಗಿದ್ದು, ಸರ್ಕಾರ ಇಂತಹ ಅಮಾನುಷ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂತಾನೋತ್ಪತಿ ಮಕ್ಕಳ ಆರೋಗ್ಯ(ಆರ್ಸಿಎಚ್) ದತ್ತಾಂಶದ ವರದಿಯು ಹೇಳಿದೆ.
ದುರಂತವೆಂದರೆ ಅತಿಹೆಚ್ಚು ಸುಶಿಕ್ಷಿತರನ್ನು ಹೊಂದಿರುವ ರಾಜಧಾನಿ ಬೆಂಗಳೂರಿನಲ್ಲಿ ಅತಿಹೆಚ್ಚು (1344), ಬೆಳಗಾವಿ(986) ಹಾಗೂ 3ನೇ ಸ್ಥಾನದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು(943) ಬಾಲ ಗರ್ಭೀಣಿ ಪ್ರಕರಣಗಳು ದಾಖಲಾಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಒಟ್ಟು 13,447 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿದ್ದು, ಸರ್ಕಾರ ಗ್ರಾಮೀಣ ಮತ್ತು ನಗರಪ್ರದೇಶಗಳಲ್ಲಿ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಈ ವರದಿಯನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಾಲಗರ್ಭಿಣಿ ಪ್ರಕರಣಗಳನ್ನು ತಡೆಗಟ್ಟಲು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಇದು ಮರುಕಳಿಸಿದರೆ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಸೂಚನೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಜ.1, 2022ರಿಂದ ಮಾರ್ಚ್ 31, 2023ರವರೆಗೆ 13,477 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ ಎಂದು ಸಂತಾನೋತ್ಪತ್ತಿ ಮಕ್ಕಳ ಆರೋಗ್ಯ ದತ್ತಾಂಶ ತಿಳಿಸಿದೆ.
ಬೆಳಗಾವಿಯಲ್ಲಿ 986, ಮೈಸೂರು 943, ಚಿತ್ರದುರ್ಗ 806, ವಿಜಯಪುರ 769 ಬಾಲ ಗರ್ಭಿಣಿಯರ ಪ್ರಕರಣಗಳಿವೆ.ಕಲಬುರ್ಗಿ ಜಿಲ್ಲೆಯಲ್ಲಿ 764, ತುಮಕೂರಿನಲ್ಲಿ 689, ಮಂಡ್ಯದಲ್ಲಿ 647, ಬಾಗಲಕೋಟೆಯಲ್ಲಿ 567, ವಿಜಯನಗರ 507, ರಾಯಚೂರಲ್ಲಿ 493, ಯಾದಗಿರಿಯಲ್ಲಿ 481, ಬಳ್ಳಾರಿಯಲ್ಲಿ 459, ದಾವಣಗೆರೆಯಲ್ಲಿ 457, ಬೀದರ್ನಲ್ಲಿ 412, ಕೋಲಾರದಲ್ಲಿ 396 ಮತ್ತು ಹಾಸನದಲ್ಲಿ 317 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ.
ರಾಮನಗರದಲ್ಲಿ 267, ಚಿಕ್ಕಬಳ್ಳಾಪುರದಲ್ಲಿ 263, ಶಿವಮೊಗ್ಗದಲ್ಲಿ 247, ಹಾವೇರಿಯಲ್ಲಿ 246, ಚಿಕ್ಕಮಗಳೂರಲ್ಲಿ 242, ಕೊಪ್ಪಳದಲ್ಲಿ 228, ಬೆಂಗಳೂರು ಗ್ರಾಮಾಂತರದಲ್ಲಿ 216, ಚಾಮರಾಜನಗರದಲ್ಲಿ 180, ಧಾರವಾಡದಲ್ಲಿ 178, ಕೊಡಗುನಲ್ಲಿ 127 ಮತ್ತು ಗದಗ ಜಿಲ್ಲೆಯಲ್ಲಿ 105, ಉತ್ತರ ಕನ್ನಡದಲ್ಲಿ 71, ದಕ್ಷಿಣ ಕನ್ನಡದಲ್ಲಿ 48 ಹಾಗೂ ಉಡುಪಿ ಜಿಲ್ಲೆಯಲ್ಲಿ 32 ಬಾಲ ಗರ್ಭಿಣಿ ಪ್ರಕರಣಗಳಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂಥ ಪ್ರಕರಣಗಳು ಪತ್ತೆಯಾಗುತ್ತಿವೆ.
ಕಾರಣವೇನು?:
ವರದಿಯಲ್ಲಿ ಬಾಲ ಗರ್ಭಿಣಿ ಪ್ರಕರಣಗಳು ಅಧಿಕವಾಗಲು ಪ್ರಮುಖ ಕಾರಣಗಳನ್ನು ವಿಶ್ಲೇಷಿಸಲಾಗಿದೆ. ಅದರಂತೆ, ಕುಟುಂಬದ ಸದಸ್ಯರ ಒತ್ತಡ, ಏಕ ಪೋಷಕತ್ವ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಾರಣಗಳಿಂದ 2,920 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ.
ಶಾಲೆಯಿಂದ ಹೊರಗುಳಿಯುವುದು, ಶೈಕ್ಷಣಿಕ ಸೌಲಭ್ಯಗಳ ಕೊರತೆಯಿಂದ 716 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಮಾನಸಿಕ ಹಾಗೂ ಭಾವನ್ಮಾಕ ಬದಲಾವಣೆಗಳು (ಪ್ರೇಮ ಪ್ರಕರಣ) ಗಳಿಂದ 2033 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ.
ತಂದೆ ಅಥವಾ ತಾಯಿ ಮಾನಸಿಕ ಅಸ್ವಸ್ಥತೆ, ವಿಧವೆ ತಾಯಿ, ಪೋಷಕರ ತೀವ್ರ ಅನಾರೋಗ್ಯ, ಕೊರೊನಾ ಕಾರಣದಿಂದ 847 ಬಾಲ್ಯ ವಿವಾಹ ಬಾಲ ಗರ್ಭಿಣಿ ಪ್ರಕರಣಗಳಿಗೆ ಕಾರಣವಾಗಿವೆ ಎಂದು ವರದಿ ಹೇಳಿದೆ.
ನಿಯಂತ್ರಣಕ್ಕೆ ಕ್ರಮಗಳೇನು?:
ಎಲ್ಲಾ ಸಂಬಂಧಿತ ಇಲಾಖೆಗಳು ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕಣಗಳ ತಡೆಗಟ್ಟಲು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವುದು ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಬಾಲ್ಯವಿವಾಹ ಮೇಲ್ವಿಚಾರಣಾ ಸಮಿತಿಗಳನ್ನು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿಗಳ ಬಲವರ್ಧನೆಗೊಳಿಸಿ, ಪ್ರತಿ ತಿಂಗಳು ದತ್ತಾಂಶದ ಪ್ರಕಾರ, ಬಾಲ್ಯವಿವಾಹ ಪ್ರಕರಣಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ.
ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟಲು ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.