Friday, September 20, 2024
Homeಬೆಂಗಳೂರುಭಾರಿ ವಾಹನಗಳಿಗೆ ಪೀಣ್ಯ ಫ್ಲೈಓವರ್‌ ಸಂಚಾರಕ್ಕೆ ಮುಕ್ತ, ವಾರದಲ್ಲಿ 6 ದಿನ ಮಾತ್ರ ಅವಕಾಶ

ಭಾರಿ ವಾಹನಗಳಿಗೆ ಪೀಣ್ಯ ಫ್ಲೈಓವರ್‌ ಸಂಚಾರಕ್ಕೆ ಮುಕ್ತ, ವಾರದಲ್ಲಿ 6 ದಿನ ಮಾತ್ರ ಅವಕಾಶ

ಬೆಂಗಳೂರು,ಜು.29- ಕಳೆದ ಎರಡು ವರ್ಷಗಳಿಂದ ಭಾರೀ ವಾಹನಗಳ ಸಂಚಾರ ನಿರ್ಬಂಧವಾಗಿದ್ದ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಇಂದಿನಿಂದ ಎಲ್ಲಾ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ರಾಜ್ಯದ ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಮೇಲ್ಸೇತುವೆಯ ತಾಂತ್ರಿಕ ಸಮಸ್ಯೆಗಳಿಂದ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಇದೀಗ ಲೋಪದೋಷಗಳನ್ನು ಸರಿಪಡಿಸಲಾಗಿದ್ದು, ರಾಜ್ಯ ಹೆದ್ದಾರಿ ಪ್ರಾಧಿಕಾರ ಇಂದಿನಿಂದ ಎಲ್ಲಾ ವಾಹನಗಳ ಸಂಚಾರಕ್ಕೆ ಹಸಿರುನಿಶಾನೆ ತೋರಿಸಿದ್ದು, ಸಂಚಾರಿ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಳೆದ ಎರಡು ವರ್ಷಗಳಿಂದ ಈ ಮಾರ್ಗದಲ್ಲಿ ಚಲಿಸುವ ವಾಹನ ಚಾಲಕರು ಹಾಗೂ ಪ್ರಯಾಣಿಕರು ಸರ್ವೀಸ್‌‍ ರಸ್ತೆಗೆ ಹೋಗಬೇಕಾಗಿತ್ತು. ಅದರಿಂದ ಸಂಚಾರಿ ದಟ್ಟಣೆಯಲ್ಲಿ ಸಿಲುಕಿ ಭಾರೀ ತೊಂದರೆ ಅನುಭವಿಸಿದ್ದರು.

4.2 ಕಿ.ಮೀ ಉದ್ದದ ಮೇಲ್ಸೇತುವೆಯಲ್ಲಿ ಸಮಸ್ಯೆ ಎದುರಾದ ಹಿನ್ನಲೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ತುಮಕೂರು ರಸ್ತೆಯಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಆಗುತ್ತಿತ್ತು. ಫ್ಲೇಓವರ್‌ನಲ್ಲಿ ಪ್ರಿಸ್ಟೈಡ್‌ ಕೇಬಲ್‌ಗಳ ಹಾಳಾದ ಹಿನ್ನಲೆಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇದೀಗ ಹೊಸದಾಗಿ ಕೇಬಲ್‌ಗಳನ್ನು ಅಳವಡಿಸಿದ್ದು, ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.

ಆರು ದಿನ ಮಾತ್ರ ಅವಕಾಶ:
ಮೇಲ್ಸೇತುವೆಯ ವಿಶೇಷ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೂ ಭಾರೀ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ. ಜೊತೆಗೆ ಮೇಲ್ಸೇತುವೆ ಎಡ, ಬಲ ಪಕ್ಕದಲ್ಲಿ ಗರಿಷ್ಠ 40 ಕಿ.ಮೀ ವೇಗದಲ್ಲಿ ಚಲಿಸುವಂತೆ ಹೆದ್ದಾರಿ ಅಧಿಕಾರಿಗಳು ಸೂಚಿಸಿದ್ದು, ಒಂದು ವೇಳೆ ನಿಯಮ ಮೀರಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಟ್ರಾಫಿಕ್‌ ಸಮಸ್ಯೆಯಲ್ಲಿ ಸಿಲುಕಿ ಹೈರಾಣರಾಗಿದ್ದ ದಿನನಿತ್ಯ ಸಂಚರಿಸುವ ಪ್ರಯಾಣಿಕರು ಹಾಗೂ ವಾಹನಗಳ ಚಾಲಕರು ನಿರಾಳವಾಗಿ ಫ್ಲೈಓವರ್‌ ಮೇಲೆ ವಾಹನಗಳನ್ನು ಚಲಾಯಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ಗೊರಗುಂಟೆಪಾಳ್ಯ ಫ್ಲೈಓವರ್‌ ಸರ್ವೀಸ್‌‍ ರಸ್ತೆಯಿಂದ 8ನೇ ಮೈಲಿವರೆಗೂ ಹೋಗಬೇಕಾದರೆ ಸುಮಾರು ಒಂದು ಗಂಟೆ ಕಾಲಾವಕಾಶ ಬೇಕಾಗಿತ್ತು. ಇದರಿಂದ ಪ್ರಯಾಣಿಕರು ಭಾರೀ ಕಿರಿಕಿರಿ ಅನುಭವಿಸಿದ್ದರು. ಈಗ ಫ್ಲೈಓವರ್‌ ಸಂಚಾರಕ್ಕೆ ಮುಕ್ತವಾಗಿದ್ದು, ಸರ್ವೀಸ್‌‍ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದೆ.

RELATED ARTICLES

Latest News