Friday, November 22, 2024
Homeರಾಜ್ಯಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತೆ ಎಂದವರಿಗೆ ಆರ್ಥಿಕ ಬೆಳವಣಿ ಸಾಧಿಸಿ ಉತ್ತರ ನೀಡುತ್ತೇವೆ : ಸಿಎಂ

ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತೆ ಎಂದವರಿಗೆ ಆರ್ಥಿಕ ಬೆಳವಣಿ ಸಾಧಿಸಿ ಉತ್ತರ ನೀಡುತ್ತೇವೆ : ಸಿಎಂ

ಬೆಂಗಳೂರು,ಆ.15- ಪಂಚಖಾತ್ರಿ ಯೋಜನೆಗಳು ಅಬಾಧಿತವಾಗಿ ಮುಂದುವರೆಯಲಿವೆ. ಅವುಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿದವರಿಗೆ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿ ತೋರಿಸುವ ಮೂಲಕ ಉತ್ತರ ನೀಡಲಿದ್ದೇವೆ ಎಂದು ಸವಾಲು ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಲಕ್ಷ್ಮಿ ಫಲಾನುಭವಿಗಳನ್ನು ಸಂಘಟಿಸಿ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ವರಮಾನ ತರುವ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವುದಾಗಿ ಘೋಷಿಸಿದ್ದಾರೆ.

78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫೀಲ್ಡ್ ಮಾರ್ಷಲ್‌ ಮಾಣಿಕ್‌ ಷಾ ಪೆರೇಡ್‌ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪಂಚಖಾತ್ರಿ ಯೋಜನೆಗಳಷ್ಟೇ ಅಲ್ಲದೆ ಕಲ್ಯಾಣ ಯೋಜನೆಗಳಿಗೆ 13 ಸಾವಿರ ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂ. ಪಡೆಯುತ್ತಿರುವ ಫಲಾನುಭವಿಗಳನ್ನು ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘಗಳನ್ನು ಸಂಘಟಿಸುವ ಮೂಲಕ ವಿವಿಧ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಒದಗಿಸಿ ವರಮಾನ ತರುವ ಚಟುವಟಿಕೆಗಳಲ್ಲಿ ತೊಡಗಿಸಲಾಗುವುದು. ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದಾಗಿಹೇಳಿದ್ದಾರೆ.

ಶಕ್ತಿ ಯೋಜನೆಯಡಿ 270 ಕೋಟಿ ಉಚಿತ ಪ್ರಯಾಣ ಸೌಲಭ್ಯ ಪಡೆಯುವ ಮೂಲಕ ಮಹಿಳೆಯರು 6,541 ಕೋಟಿ ರೂ.ಗಳಷ್ಟು ಪ್ರಯಾಣ ವೆಚ್ಚವನ್ನು ಉಳಿತಾಯ ಮಾಡಿದ್ದಾರೆ. 120 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 25,259 ಕೋಟಿ ರೂ.ಗಳನ್ನು ಅವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ.

ಅನ್ನಭಾಗ್ಯ ಯೋಜನೆಯಡಿ 4.08 ಕೋಟಿ ಫಲಾನುಭವಿಗಳ 1.16 ಕೋಟಿ ಪಡಿತರ ಚೀಟಿಗಳಿಗೆ 7,763 ಕೋಟಿ ರೂ. ನಗದನ್ನು ಪಾವತಿಸಲಾಗಿದೆ. ಗೃಹಜ್ಯೋತಿಯಡಿ 8,844 ಕೋಟಿ ರೂ.ಗಳನ್ನು, ಯುವನಿಧಿ ಯೋಜನೆಯಡಿ 91 ಕೋಟಿ ರೂ.ಗಳನ್ನು ಭರಿಸಲಾಗಿದೆ ಎಂದು ವಿವರಿಸಿದರು.

ಸಾಮಾಜಿಕ ಭದ್ರತೆ ಯೋಜನೆಯಡಿ 13,027 ಕೋಟಿ ರೂ.ಗಳನ್ನು ವಿವಿಧ ಮಾಸಾಶನ ರೂಪದಲ್ಲಿ ನೀಡಲಾಗುತ್ತಿದೆ. ಹಾಲು ಉತ್ಪಾದಕರಿಗೆ 1822 ಕೋಟಿ ರೂ.ಗಳನ್ನು ಪ್ರೋತ್ಸಾಹ ಧನ, ಬೆಳೆಸಾಲ, ಸ್ವಸಹಾಯ ಸಂಘಗಳ ಸಾಲಗಳಿಗೆ 1642 ಕೋಟಿ ರೂ. ಬಡ್ಡಿ ಸಹಾಯ ಧನ, ಕೃಷಿ ಪಂಪ್‌ಸೆಟ್‌ಗಳಿಗೆ 20 ಸಾವಿರ ಕೋಟಿಗಳಷ್ಟು ಉಚಿತ ವಿದ್ಯುತ್‌ ಒದಗಿಸಲಾಗಿದೆ.

ಕೊಬ್ಬರಿಗೆ ಪ್ರೋತ್ಸಾಹ ಧನ, ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಮೋಟಾರು ಮತ್ತು ಇತರ ಸಂಬಂಧಿತ ಕಾರ್ಮಿಕರಿಗೆ ಚಲನಚಿತ್ರ ಕ್ಷೇತ್ರ, ಗಿಗ್‌ ಕಾರ್ಮಿಕರ ವಿಮಾ ಸೌಲಭ್ಯಗಳು, ಪತ್ರಿಕಾ ವಿತರಕರಿಗೆ ಅಪಘಾತ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂಪಿಸಲಾದ ಯೋಜನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

RELATED ARTICLES

Latest News