ಬೆಂಗಳೂರು,ಆ.17- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ಅಭಿಯೋಜನೆಗೆ ಅನುಮತಿ ನೀಡಿರುವುದರ ವಿರುದ್ದ ಕಾನೂನು ಸಮರದ ಚರ್ಚೆ ನಡೆಸಲು ಸಚಿವ ಸಂಪುಟ ತುರ್ತು ಹಾಗೂ ವಿಶೇಷ ಸಭೆ ಕರೆಯಲಾಗಿದೆ.
ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿಂದೆ ನಡೆದಿದ್ದ ಸಚಿವ ಸಂಪುಟ ಸಭೆಗೆ ಸಿದ್ದರಾಮಯ್ಯ ಗೈರು ಹಾಜರಾಗಿದ್ದರು. ತಮ ಮೇಲೆಯೇ ಆರೋಪ ಇರುವುದರಿಂದ ಸಚಿವ ಸಂಪುಟ ಸಭೆ ನನ್ನ ನೇತೃತ್ವದಲ್ಲಿ ನಡೆಯುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಅವರು ಹಿಂದೆ ಸರಿದಿದ್ದರು.
ಕೊನೆಗೆ ಮುಖ್ಯಮಂತ್ರಿಗಳ ಗೈರು ಹಾಜರಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅಭಿಯೋಜನೆಗೆ ಅನುಮತಿ ನೀಡುವಂತೆ ಸಲ್ಲಿಸಲಾಗಿರುವ ದೂರು ಅರ್ಜಿಗಳನ್ನು ತಿರಸ್ಕಾರ ಮಾಡಬೇಕು ಹಾಗೂ ಅಭಿಯೋಜನೆಗೆ ಅನುಮತಿ ನೀಡಬಾರದು ಎಂಬ ಸಲಹೆಯನ್ನು ರಾಜ್ಯಪಾಲರಿಗೆ ನೀಡಲಾಗಿತ್ತು.
ಅದನ್ನು ಬದಿಗಿರಿಸಿ ಕೊನೆಗೂ ರಾಜ್ಯಪಾಲರು ಪೂರ್ವಾನುಮತಿ ನೀಡುವ ಮೂಲಕ ರಾಜಕೀಯ ಹೈಡ್ರಾಮಕ್ಕೆ ಮಹತ್ವದ ತಿರುವು ನೀಡಿದ್ದಾರೆ. ಈಗಿರುವ ಪರಿಸ್ಥಿತಿಯಲ್ಲಿ ಮುಂದಿನ ಕಾನೂನು ಸಮರದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಸಚಿವ ಸಂಪುಟದಲ್ಲಿ ಅಭಿಯೋಜನೆಯ ವಿರುದ್ಧವಾಗಿ ಸರ್ಕಾರದ ವತಿಯಿಂದಲೇ ಹೈಕೋರ್ಟ್ಗೆ ಮೇಲನವಿ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಗಳಿವೆ.
ಆದರೆ ಸರ್ಕಾರ ಎಂದರೆ ರಾಜ್ಯಪಾಲರು. ಸಾಂವಿಧಾನಿಕ ಮುಖ್ಯಸ್ಥರೂ ಆಗಿರುವ ರಾಜ್ಯಪಾಲರ ನಿರ್ಧಾರಗಳೇ ಅಂತಿಮವೇ ? ಅಥವಾ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸಂಪುಟದ ನಿರ್ಧಾರ ಮುಖ್ಯವೇ ಎಂಬ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ.
ಸರ್ಕಾರದ ವತಿಯಿಂದ ಮುಖ್ಯಮಂತ್ರಿಗಳ ಪರವಾಗಿ ರಾಜ್ಯಪಾಲರ ನಿರ್ಣಯವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದರೆ, ಸರ್ಕಾರದ ವಿರುದ್ಧ ಸರ್ಕಾರವೇ ನಿಂತಂತಹ ಸನ್ನಿವೇಶ ಎದುರಾಗಲಿದೆ. ಹೀಗಾಗಿ ಸಾಂವಿಧಾನಿಕ ಬಿಕಟ್ಟು ಉಲ್ಬಣಗೊಳ್ಳುವ ಆತಂಕವಿದೆ.ಜೊತೆಗೆ ದೂರುದಾರರು ರಾಜ್ಯಪಾಲರಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಸಾಕಷ್ಟು ಕಾನೂನಿನ ತೊಡಕುಗಳಿವೆ. ಮುಡಾ ಪ್ರಕರಣದಲ್ಲಿ ಪರ್ಯಾಯ ನಿವೇಶನ ಪಡೆದುಕೊಂಡಿರುವುದು ಪಾರ್ವತಿ ಸಿದ್ದರಾಮಯ್ಯ ಅವರು. ಆದರೆ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ.
ನಿವೇಶನಗಳ ಹಂಚಿಕೆಯಾಗಿದ್ದ ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿಲ್ಲ. ಆದರೂ ಪ್ರಭಾವ ಬಳಕೆಯಾಗಿದೆ, ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದು ಗಂಭೀರ ಚರ್ಚೆಗೆ ಗ್ರಾಸವಾಗಿದೆ.ಬಿಜೆಪಿ ಸರ್ಕಾರದ ಅವಧಿಯಲ್ಲೇ ಅದರಲ್ಲೂ ಮುಡಾದಲ್ಲಿ ಬಿಜೆಪಿಯ ನಾಯಕರೇ ಅಧ್ಯಕ್ಷರಾಗಿದ್ದ ವೇಳೆ ನಿವೇಶನ ಹಂಚಿಕೆ ಮಾಡಲಾಗಿದೆ. ಪಾರ್ವತಿ ಸಿದ್ದರಾಮಯ್ಯನವರಿಗೆ ಅಷ್ಟೇ ಅಲ್ಲದೆ ಹಲವಾರು ಮಂದಿಗೆ ಬದಲಿ ನಿವೇಶನಗಳನ್ನು ನೀಡಲಾಗಿದೆ.
ಪ್ರಕರಣವೊಂದರಲ್ಲಿ ಹೈಕೋರ್ಟ್ ಮುಡಾಗೆ ಛೀಮಾರಿ ಹಾಕಿ ಅರ್ಜಿದಾರರ ಪರವಾಗಿ ತೀರ್ಪು ನೀಡಿತ್ತು. ಆದರೆ ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ಭೂಮಿಯ ಪರಭಾರೆಯಿಂದ ಶುರುವಾಗಿ ಹಲವಾರು ಲೋಪಗಳನ್ನು ವಿರೋಧ ಪಕ್ಷದ ನಾಯಕರು ಪ್ರಸ್ತಾಪಿಸಿದ್ದಾರೆ.
ಲೋಪಗಳು ನಡೆದಿರುವ ಕಾಲಾವಧಿ ಮತ್ತು ಸಿದ್ದರಾಮಯ್ಯ ಅಧಿಕಾರದಲ್ಲಿರುವ ಕಾಲಾವಧಿ ಎರಡೂ ಭಿನ್ನವಾಗಿವೆ.
ಸಿದ್ದರಾಮಯ್ಯ ಅವರು ಹೇಳಿರುವ ಪ್ರಕಾರ ತಾವು ಯಾವುದೇ ಪ್ರಭಾವ ಬೀರಿಲ್ಲ. ನಾನು ಸಹಿ ಮಾಡಿರುವ ಒಂದೇ ಒಂದು ಕಾಗದವನ್ನು ತೋರಿಸಿ ಎಂದು ಪದೇ ಪದೇ ಹೇಳುತ್ತಿದ್ದಾರೆ. ಹಾಗಿದ್ದರೂ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅದರಲ್ಲೂ ಹಿಂದಿನ ಐಪಿಸಿ ಸೆಕ್ಷನ್ಗಳು ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಭಾರತೀಯ ನ್ಯಾಯಸಂಹಿತೆ ಜೊತೆಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಗಳ ಬಹುತೇಕ ಸೆಕ್ಷನ್ಗಳನ್ನು ಉಲ್ಲೇಖ ಮಾಡಲಾಗಿದೆ.
ಭೂಮಿ ಪರಭಾರೆ ಆಗಿರುವುದು, ನಿವೇಶನ ಹಂಚಿಕೆಯಾಗಿರುವುದು ಎಲ್ಲವೂ 2021ರ ಹಿಂದೆ. ಭಾರತೀಯ ನ್ಯಾಯ ಸಂಹಿತೆ ಅನುಸಾರ 2024ರ ಜುಲೈ 1ರ ನಂತರದ ಕೃತ್ಯಗಳನ್ನು ಹೊಸ ಕಾನೂನುಗಳಡಿ ದಾಖಲಿಸಲು ಅವಕಾಶವಿದೆ. ಈ ಹಿಂದೆ ನಡೆದಿರುವ ಪ್ರಕರಣಗಳನ್ನು ಹೊಸ ಕಾನೂನಿನಡಿ ದಾಖಲಿಸಲು ಅಭಿಯೋಜನೆಗೆ ಅನುಮತಿ ನೀಡಿರುವ ತಾಂತ್ರಿಕ ಅಂಶಗಳನ್ನು ಪ್ರಶ್ನಿಸಲು ಚರ್ಚಿಸಲಾಗಿದೆ.