ಬೆಂಗಳೂರು,ಆ.18- ರಾಜ್ಯಪಾಲರ ಅಭಿಯೋಜನೆ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕಾಂಗ ಸಭೆ ಕರೆಯುವ ಮೂಲಕ ತಮ ಪಕ್ಷದ ಚುನಾಯಿತ ಪ್ರತಿನಿಧಿಗಳ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.
ಗುರುವಾರ ಸಂಜೆ 4 ಗಂಟೆಗೆ ವಿಧಾನಸೌಧದ ಸಮೇಳನ ಸಭಾಂ ಗಣದಲ್ಲಿ ಶಾಸಕಾಂಗ. ಸಭೆಯನ್ನು ಆಯೋಜಿಸಲಾಗಿದೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ತನಿಖೆ ನಡೆಸುವ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ.
ನ್ಯಾಯಾಲಯದಿಂದ ತನಿಖೆಗೆ ಆದೇಶವಾದರೆ ಎಫ್ಐಆರ್ ದಾಖಲಾಗಲಿದ್ದು, ಮುಂದಿನ ಕಾನೂನು ಕ್ರಮಗಳು ಜರುಗಲಿವೆ. ಅಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳು, ಮುಖ್ಯಮಂತ್ರಿಯವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಡವನ್ನು ಹೆಚ್ಚಿಸಲಿದ್ದಾರೆ.
ಹೀಗಾಗಿ ಎಚ್ಚೆತ್ತುಕೊಂಡಿರುವ ಸಿದ್ದರಾಮಯ್ಯ ಪ್ರತಿ ಹಂತದಲ್ಲೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಸಾಮಾನ್ಯವಾಗಿ ಅಧಿವೇಶನ ನಡೆಯುವ ವೇಳೆಗೆ ಶಾಸಕಾಂಗ ಸಭೆ ನಡೆಸುವುದು ರೂಢಿ. ಆದರೆ ರಾಜಕೀಯ ತುರ್ತು ಸಂದರ್ಭ ಎದುರಾಗಿರುವುದರಿಂದ ಅಕಾಲಿಕ ಸಭೆಯನ್ನು ಆಯೋಜಿಸಲಾಗಿದೆ.
ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸುತ್ತಿದ್ದಂತೆ ಸಚಿವ ಸಂಪುಟದ ವಿಶೇಷ ಸಭೆ ನಡೆಸಿ ಅಭಿಯೋಜನೆಯ ಪೂರ್ವಾನುಮತಿ ಬಯಸಿದ ದೂರದನ್ನು ತಿರಸ್ಕಾರ ಮಾಡಬೇಕು ಮತ್ತು ಅಭಿಯೋಜನೆಗೆ ಅನುಮತಿ ನೀಡಬಾರದೆಂಬ ಸಲಹೆ ರೂಪದ ನಿರ್ಣಯವನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅದನ್ನೂ ಮೀರಿ ರಾಜ್ಯಪಾಲರು ಅನುಮತಿ ನೀಡಿದ್ದರಿಂದಾಗಿ ನಿನ್ನೆ ಮತ್ತೊಮೆ ತುರ್ತು ಸಚಿವ ಸಂಪುಟ ಸಭೆ ನಡೆಸಿ ರಾಜ್ಯಪಾಲರ ನಿರ್ಣಯವನ್ನು ಖಂಡಿಸಲಾಗಿದೆ. ಮುಖ್ಯಮಂತ್ರಿಗೆ ಸರ್ವಾನುಮತದ ಬೆಂಬಲ ಸಂಪುಟದಲ್ಲಿ ವ್ಯಕ್ತವಾಗಿದೆ.
ಮುಖ್ಯಮಂತ್ರಿಯವರು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಮಗೆ ಹೈಕಮಾಂಡ್, ಪಕ್ಷದ ಕಾರ್ಯಕರ್ತರ ಹಾಗೂ ಶಾಸಕರ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದ್ದರು.
ವಿರೋಧ ಪಕ್ಷಗಳ ಟೀಕೆಗಳ ನಡುವೆಯೂ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನವರಿಗೆ ಒಗ್ಗಟ್ಟಿನ ಬೆಂಬಲ ಕಂಡುಬರುತ್ತಿದೆ. ಇದನ್ನು ಅಧಿಕೃತವಾಗಿ ಖಚಿತಪಡಿಸಿಕೊಳ್ಳಲು ಸಿದ್ದರಾಮಯ್ಯ ಶಾಸಕಾಂಗ ಸಭೆ ಕರೆದಿದ್ದಾರೆ.