Monday, September 16, 2024
Homeರಾಜಕೀಯ | Politicsಸಿಎಂ ಸಿದ್ದರಾಮಯ್ಯನವರಿಗೆ 'ಬಂಡೆ'ಯಿಂದಲೇ ಡೇಂಜರ್ : ಹೆಚ್ಡಿಕೆ ಮಾರ್ಮಿಕ ಹೇಳಿಕೆ

ಸಿಎಂ ಸಿದ್ದರಾಮಯ್ಯನವರಿಗೆ ‘ಬಂಡೆ’ಯಿಂದಲೇ ಡೇಂಜರ್ : ಹೆಚ್ಡಿಕೆ ಮಾರ್ಮಿಕ ಹೇಳಿಕೆ

ಬೆಂಗಳೂರು, ಆ.18- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಹೇಳುವುದಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡುತ್ತಾರೆಂಬ ನಂಬಿಕೆಯೂ ಇಲ್ಲ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಡೇಂಜರ್. ಇತ್ತೀಚೆಗೆ ಮಳೆ ಬಂದು ಭೂ ಕುಸಿತವಾದಾಗಲ್ಲೂ ಬಂಡೆಗಳಿಂದಲ್ಲೇ ಡೇಂಜರ್ ಆಗಿದ್ದು ಎಂದು ಮಾರ್ಮಿಕವಾಗಿ ನುಡಿದರು.

ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕಾನೂನು ಪ್ರಕಾರ ಏನು ನಡೆಯಬೇಕೋ ಅದು ನಡೆಯಲಿದೆ. ಯಾವ ಹಂತದಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗಲಿದೆ ಎಂದರು.

ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಮಾಡಿರುವುದಕ್ಕೂ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದಕ್ಕೂ ಸಂಬಂಧವಿಲ್ಲ. ನಮ ಪಾದಯಾತ್ರೆಯಿಂದ ಇದೆಲ್ಲವೂ ಆಗಿದೆ ಎಂದು ಹೇಳುವುದಿಲ್ಲ. ನಾಡಿನ ಜನತೆಗೆ ರಾಜಕೀಯ ಸಂದೇಶ ಕೊಡಬೇಕಿತ್ತು. ಅದನ್ನು ಕೊಟ್ಟಿದ್ದೇವೆ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಅವರ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಏಕೆ ಅನುಮತಿ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. 2006ರಲ್ಲಿ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಗಣಿಗಾರಿಕೆ ನಡೆಸುವ ಮಾಲೀಕರಿಂದ ಹಣ ಸಂಗ್ರಹ ಮಾಡಿದ ಆರೋಪ ಮಾಡಿದ್ದರು. ಅದರ ಬಗ್ಗೆ ಒಂದು ಸಿಡಿ ಮಾಡಲು ಸಿಡಿ ಶಿವು ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದರು.

ವಿಧಾನಸಭೆಯಲ್ಲಿ ಬಂದು ಆಪರೇಷನ್ ಸಕ್ಸಸ್ ಆಗಿದೆ ಅಂದರು. ಆಗ ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ ಎಂದಿದ್ದೆ. ನಿಮ ಹಾಗೆ ಕಾರ್ಯಕರ್ತರಿಗೆ ಬೀದಿಯಲ್ಲಿ ಬೆಂಕಿ ಹಾಕಿ ಅನ್ನಲಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಜಂತಕಲ್ ಮೈನಿಂಗ್ ಬಗ್ಗೆ ಹೈಕೋರ್ಟ್ ಏನು ಆದೇಶ ಕೊಟ್ಟಿದೆ ಎಂಬುದನ್ನು ನೋಡಲಿ. ಸಾಯಿ ವೆಂಕಟೇಶ್ವರ ಹಗರಣ ತನಿಖೆ ಮಾಡಿ ಅಂದರು. ನೀವು ಬೇಕಾದರೆ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು. ಬೇಡವೆಂದವರು ಯಾರು? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.

ನನ್ನನ್ನು ಹೆದರಿಸಲು ಮಾತನಾಡುತ್ತಿದ್ದೀರಾ? ಏಕೆ ಈ ನಾಟಕಗಳು? ರಾಜ್ಯಪಾಲರ ವಿರುದ್ಧ ಇದೇ ಮೊದಲ ಬಾರಿಗೆ ಪ್ರತಿಭಟನೆಗಳು ಅಗುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾಡುಗೊಲ್ಲರ ಮೀಸಲಾತಿ ವಿಚಾರದ ಬಗ್ಗೆ ಚರ್ಚೆ ಮಾಡಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೇಂದ್ರ ಸಚಿವ ಅಮಿತ್ ಶಾ ಅವರ ಬಳಿ ಹೋಗಿದ್ದರು. ಅನಂತರ ನಮ ಮೇಲೆ ಕೆಂಡ ಕಾರುತ್ತಿದ್ದಾರೆ. ಜೈಲಿಗೆ ಕಳುಹಿಸಬೇಕೆಂದು ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ನಂತೆ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ, ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಕಿಡಿ ಕಾರಿದರು.ಲೋಕಾಯುಕ್ತ ತನಿಖೆ ಬಂದಾಗ ಅದನ್ನು ಮುಚ್ಚಿ ಹಾಕಿ ಎಸಿಬಿ ರಚಿಸಿ ಅದರಿಂದಲ್ಲೆ ರಕ್ಷಣೆ ಪಡೆದುಕೊಂಡರು ಎಂದು ಅವರು ಟೀಕಿಸಿದರು.

RELATED ARTICLES

Latest News