ಬೆಂಗಳೂರು,ಆ.26- ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್ನಿಂದಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ಮೊಬೈಲ್ ಸಂಪರ್ಕಗಳೇ ದುಸ್ತರವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಲಕ್ಷ್ಮಣ್ ಎಂಬುವರು, ಜೈಲಿನ ಒಳಗೆ ಮೊಬೈಲ್ಗಳು ಬಳಕೆಯಾಗುತ್ತಿವೆ. ದರ್ಶನ್ ಅವರು ವಿಡಿಯೋ ಕಾಲ್ ಮೂಲಕ ಹೊರಗಿನವರೊಂದಿಗೆ ಮಾತನಾಡಿದ್ದಾರೆ. ಆದರೆ ಸುತ್ತಮುತ್ತಲಿನವರಿಗೆ ಮೊಬೈಲ್ ಸಂಪರ್ಕವೇ ಸಿಗದೆ ಸಮಸ್ಯೆಯಾಗುತ್ತಿದೆ ಎಂದರು.
ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಗೆ ಕರೆ ಮಾಡಲಾಗುತ್ತಿಲ್ಲ, ಕ್ಯಾಬ್ ಬುಕ್ ಮಾಡಲಾಗುತ್ತಿಲ್ಲ, ಮಕ್ಕಳು ಶಾಲೆಯಿಂದ ಬಂದರೋ, ಇಲ್ಲವೋ ಎಂಬುದನ್ನು ತಿಳಿದು ಕೊಳ್ಳಲೂ ಮೊಬೈಲ್ ಸಂಪರ್ಕವಿಲ್ಲದೆ ಕಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು.
ಜೈಲಿನಲ್ಲಿ ಅಳವಡಿಸಲಾಗಿರುವ ಜಾಮರ್ ಫ್ರೀಕ್ವೆನ್ಸಿಯನ್ನು ಕಡಿಮೆ ಮಾಡುವಂತೆ ಮೂರ್ನಾಲ್ಕು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಹಿರಿಯ ಅಧಿಕಾರಿಗಳಿಗೆ, ಜೈಲಿನ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೆ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಜಾಮರ್ನಿಂದಾಗಿ ಸುತ್ತಮುತ್ತಲಿನ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಆದರೆ ಜೈಲಿನ ಒಳಗಿರುವ ದರ್ಶನ್ಗೆ ವಿಡಿಯೋ ಕಾಲ್ ಸೇರಿದಂತೆ ಎಲ್ಲ ಸಂಪರ್ಕಗಳು ಸುಲಲಿತವಾಗಿದೆ. ಇದು ಜೈಲಿನ ಅಧಿಕಾರಿಗಳ ಕಳ್ಳಾಟಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರು.
ಸ್ಥಳೀಯರ ಸಮಸ್ಯೆಗಳನ್ನು ಕಡೆಗಣಿಸಲಾಗುತ್ತಿದೆ. ಗೃಹಸಚಿವರು, ಮುಖ್ಯಮಂತ್ರಿ ಯವರು ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು. ದುಡ್ಡಿದ್ದರೆ ಜೈಲಿನಲ್ಲಿ ರೆಸಾರ್ಟ್ನಲ್ಲಿದ್ದಂತೆ ಆರಾಮಾಗಿ ಇರಬಹುದು.
ಇದು ಎಲ್ಲರಿಗೂ ಗೊತ್ತು ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದರು. ಜೈಲಿನ ಹೊರಗೆ ಜಾಮರ್ ಹಾಕಿ ಜನರನ್ನು ನಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜೈಲಿನ ಒಳಗೆ ಯಾವುದೇ ಅಡೆತಡೆ ಇಲ್ಲದಂತೆ ಮೊಬೈಲ್ ಬಳಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕಿಡಿಕಾರಿದರು.