ಶಿಲ್ಲಾಂಗ್,ಆ.29: ಬಾಂಗ್ಲಾದೇಶದ ಗಡಿಯಲ್ಲಿರುವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ವೀಳ್ಯದೆಲೆ ತೋಟದಿಂದ ಅವಾಮಿ ಲೀಗ್ ನಾಯಕ ಇಶಾಕ್ ಅಲಿ ಖಾನ್ ಪನ್ನಾ ಅವರ ಕೊಳೆತ ಶವ ಪತ್ತೆಯಾಗಿದೆ.
ಭಾರತ-ಬಾಂಗ್ಲಾದೇಶ ಗಡಿಯಿಂದ ಸುಮಾರು 1.5 ಕಿಮೀ ದೂರದಲ್ಲಿ ಶವ ಪತ್ತೆಯಾಗಿದ್ದು, ಪಾಸ್‌ಪೋರ್ಟ್ ಮೂಲಕ ಗುರುತು ಸಿಕ್ಕಿತು ಎಂದು ಎಸ್ಪಿ ಗಿರಿ ಪ್ರಸಾದ್ ತಿಳಿಸಿದ್ದಾರೆ.
ಬಾಂಗ್ಲಾದೇಶದ ಛತ್ರ ಲೀಗ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಅಲ್ಲಿನ ಪಿರೋಜ್‌ಪುರ ಜಿಲ್ಲೆಯ ಅವಾಮಿ ಲೀಗ್‌ನ ಪ್ರಮುಖ ಸದಸ್ಯರಾಗಿರುವ ಪನ್ನಾ ಅವರು ಆ. 5 ರಂದು ಶೇಖ್ ಹಸೀನಾ ಸರ್ಕಾರದ ಪತನದ ನಂತರ ನಾಪತ್ತೆಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಗುರುತಿಗಾಗಿ ಮೃತದೇಹವನ್ನು ಖ್ಲೀಹ್ರಿಯತ್ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.ಗಡಿ ದಾಟಲು ಪ್ರಯತ್ನಿಸುತ್ತಿದ್ದಾಗ ಪನ್ನಾ ಹೃದಯ ಸ್ತಂಭನಕ್ಕೆ ಒಳಗಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ.
ಆದಾಗ್ಯೂ, ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಯೊಂದಿಗೆ ಗುಂಡಿನ ದಾಳಿಯ ಘಟನೆಯಲ್ಲಿ ಅವರು ಭಾಗಿಯಾಗಿರಬಹುದು ಶಂಕೆಯೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.