ಬೆಂಗಳೂರ,ಆ.29- ಅಭಿಮಾನಿಗಳ ಕಣ್ತಪ್ಪಿಸಿ ದರ್ಶನ್ನನ್ನು ಬಳ್ಳಾರಿಗೆ ಕರೆದೊಯ್ಯುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಬಳ್ಳಾರಿ ಜೈಲಿಗೆ ದರ್ಶನ್ ಸ್ಥಳಾಂತರವಾಗುತ್ತಿರುವ ವಿಷಯ ತಿಳಿದು ಇಂದು ಮುಂಜಾನೆಯಿಂದಲೇ ಅವರ ನೂರಾರು ಅಭಿಮಾನಿಗಳು ಬಳ್ಳಾರಿ ಕಾರಾಗೃಹ ಬಳಿ ಜಮಾಯಿಸಿದ್ದರು.
ಅಭಿಮಾನಿಗಳನ್ನು ನಿಯಂತ್ರಿಸಲು ಕಾರಾಗೃಹದ ಸುತ್ತ ಪೊಲೀಸ್ ಬಿಗಿಬಂದೋಬಸ್ತ್ ಮಾಡ ಲಾಗಿತ್ತು. ಕಾರಾಗೃಹದ ಬಳಿ ದರ್ಶನ್ನನ್ನು ಕರೆತರುತ್ತಿದ್ದಂತೆ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಜೈಕಾರ ಕೂಗಿ ತಮ ಅಭಿಮಾನ ಮೆರೆದರು.
ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಫೋಟೋ ವೈರಲ್ಲಾಗುತ್ತಿದ್ದಂತೆ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿ ಬಳ್ಳಾರಿ ಕಾರಾಗೃಹಕ್ಕೆ ಜೈಲಾಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ.
ನಿನ್ನೆ ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಸ್ಥಳಾಂತರಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಪ್ರಕ್ರಿಯೆ ಮುಗಿಸಲು ತಡವಾದ ಕಾರಣ ಇಂದು ಮುಂಜಾನೆ ದರ್ಶನ್ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಕಾಫಿ ಕುಡಿಯುತ್ತಾ, ಒಂದು ಕೈಯಲ್ಲಿ ಸಿಗರೇಟ್ ಇರುವ ಫೋಟೋ ವೈರಲ್ಲಾಗಿದ್ದರ ಜೊತೆಗೆ ತಮ ಸೆಲ್ನಿಂದಲೇ ವಿಡಿಯೋ ಕಾಲ್ನಲ್ಲಿ ರೌಡಿಯ ಮಗನೊಂದಿಗೆ ಮಾತನಾಡಿರುವುದು ಕೂಡ ದರ್ಶನ್ಗೆ ಕಂಟಕವಾಗಿ ಪರಿಣಮಿಸಿತ್ತು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜೈಲಿನ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಒಂಬತ್ತು ಮಂದಿಯ ತಲೆದಂಡವೂ ಆಗಿದೆ.
ದರ್ಶನ್ ಗ್ಯಾಂಗ್ ಛಿದ್ರ:
ರೇಣಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸಹಚರರಿಗೂ ಸಂಕಷ್ಟ ಎದುರಾಗಿದ್ದು, ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲು ನ್ಯಾಯಾಲಯ ಆದೇಶಿಸಿದೆ. ಮೂವರು ಆರೋಪಿಗಳು ಈಗಾಗಲೇ ತುಮಕೂರು ಜೈಲಿನಲ್ಲಿದ್ದು, ಮತ್ತೆ ಮೂವರನ್ನು ಮೈಸೂರು ಕಾರಾಗೃಹಕ್ಕೆ ಸ್ಥಳಾಂತರ ಮಾಡಲು ಸಿದ್ದತೆ ನಡೆಯುತ್ತಿದೆ.
ಮೈಸೂರು ಕಾರಾಗೃಹದಲ್ಲಿ 20 ಬ್ಯಾರೆಕ್ಗಳಿದ್ದು ಒಟ್ಟು 850 ಕೈದಿಗಳಿದ್ದಾರೆ. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕೆಲವು ಆರೋಪಿಗಳು ಮೈಸೂರಿಗೆ ಸ್ಥಳಾಂತರವಾಗುತ್ತಿರುವುದರಿಂದ ಜೈಲಿನ ಅಧಿಕಾರಿಗಳು ಸಿಸಿಟಿವಿ ಕಣ್ಗಾವಲು ಸೇರಿದಂತೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಪ್ರಕರಣದ ಮೊದಲನೇ ಆರೋಪಿ ಪವಿತ್ರಗೌಡ ಮಾತ್ರ ಇದೀಗ ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಉಳಿದುಕೊಂಡಿದ್ದಾರೆ.