ಬೆಂಗಳೂರು,ಸೆ.2- ನಗರದಲ್ಲಿ ಪ್ರಮುಖ ರಾಜಕಾಲುವೆಗಳ ಇಕ್ಕೆಲಗಳಲ್ಲಿ 30 ರಿಂದ 40 ಅಡಿ ವಿಸ್ತೀರ್ಣದ ರಸ್ತೆಯನ್ನು ನಿರ್ಮಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾಲುವೆಯ ಮಧ್ಯಭಾಗದಿಂದ 50 ಮೀಟರ್ ವಿಸ್ತೀರ್ಣಕ್ಕೆ ಯಾವುದೇ ನಿರ್ಮಾಣಗಳು ಇರಬಾರದು ಎಂಬ ನಿಯಮ ಇದೆ. ಕೆಲವು ಕಡೆ ನಿರ್ಮಾಣಗಳಾಗಿವೆ. ಅಂತಹ ಸ್ವತ್ತುಗಳಿಗೆ ಆಸ್ತಿಯ ಮೌಲ್ಯದ ಎರಡೂವರೆ ಪಟ್ಟು ಟಿಡಿಆರ್ ನೀಡಿ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಕುರಿತು ಭೂಸ್ವಾದೀನದ ಅಧಿಸೂಚನೆ ಹೊರಡಿಸಲಾಗುವುದು. ಹೆಚ್ಚು ನಿರ್ಮಾಣ ಇಲ್ಲದೇ ಇರುವ 300 ಕಿ.ಮೀ. ರಸ್ತೆಯನ್ನು ಗುರುತಿಸಲಾಗಿದೆ. ಹೆಬ್ಬಾಳದಿಂದ ನಾಗವಾರ, ಬೆಳ್ಳಂದೂರು, ದಕ್ಷಿಣ ಭಾಗ ಸೇರಿದಂತೆ ಹಲವು ಕಡೆ ಶೇ.95 ರಷ್ಟು ನಿರ್ಮಾಣ ಇಲ್ಲದೇ ಇರುವ ರಾಜಕಾಲುವೆಗಳನ್ನು ಗುರುತಿಸಿದ್ದು, ಮೊದಲ ಹಂತದಲ್ಲಿ 100 ಕಿ.ಮೀ.ರಸ್ತೆ ನಿರ್ಮಾಣಕ್ಕೆ 200 ಕೋಟಿ ರೂ. ಗಳನ್ನು ನಿಗದಿಪಡಿಸಲಾಗಿದೆ.
ಟಿಡಿಆರ್‌ಗೆ ಸಣ್ಣಪುಟ್ಟ ಸಮಸ್ಯೆಗಳಿದ್ದು, ಅದನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಇತ್ಯರ್ಥಪಡಿಸಲಾಗಿದೆ. ಸಚಿವರು, ವಿರೋಧಪಕ್ಷದ ಶಾಸಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಇಂದಿನಿಂದ ನಂಬಿಕೆ ನಕ್ಷೆ ಯೋಜನೆ ಜಾರಿಗೆ ಬರುತ್ತಿದೆ. ಕಟ್ಟಡ ನಿರ್ಮಿಸುವ ಮಾಲೀಕರು ಮಾನ್ಯತೆ ಪಡೆದ ಇಂಜಿನಿಯರ್‌ಗಳು ಅಥವಾ ಆರ್ಕಿಟೆಕ್ಟ್‌ಗಳಿಂದ ಮನೆ ನಿರ್ಮಾಣದ ನಕ್ಷೆ ತಯಾರಿಸಿ ಅದನ್ನು ಅಪ್ಲೋಡ್ ಮಾಡುವ ಮೂಲಕ ಕಾನೂನು ಪ್ರಕಾರ ನಿರ್ಮಾಣಕ್ಕೆ ಪರವಾನಗಿ ಪಡೆದುಕೊಳ್ಳಬಹುದು.
ಇದಕ್ಕೆ ಪೂರಕವಾದ ಮಾರ್ಗಸೂಚಿಗಳನ್ನು ಹಾಗೂ ಶುಲ್ಕವನ್ನು ಈಗಾಗಲೇ ಹೊರಡಿಸಲಾಗಿದೆ. ನಂಬಿಕೆ ನಕ್ಷೆಯ ಮಂಜೂರಾತಿಯಾದ ಬಳಿಕ ನಮ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಉಲ್ಲಂಘನೆಗಳ ಬಗ್ಗೆ ನಿಗಾ ವಹಿಸಲಿದ್ದಾರೆ ಎಂದರು.
ಬೆಂಗಳೂರಿನಲ್ಲಿ 2,795 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಅವುಗಳನ್ನು ಮುಚ್ಚಲು 660 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, 15 ದಿನ ಕಾಲಾವಕಾಶ ನೀಡಲಾಗುವುದು. ಮಳೆ ಸಹಕಾರ ನೀಡಿದರೆ ರಸ್ತೆ ಗುಂಡಿಗಳನ್ನು ಶೀಘ್ರವಾಗಿ ಮುಚ್ಚಲಾಗುವುದು ಎಂದು ಹೇಳಿದರು.
ಗುತ್ತಿಗೆದಾರರು ಬಾಕಿ ಬಿಲ್ ಪಾವತಿಸದವರೆಗೂ ರಸ್ತೆ ಗುಂಡಿಗಳನ್ನು ಮುಚ್ಚುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರರ ಕಷ್ಟ ನನಗೆ ತಿಳಿದಿದೆ. ಈಗಾಗಲೇ ಕಾನೂನು ಬದ್ಧವಾಗಿ ಬಾಕಿಯನ್ನು ಪಾವತಿಸಲಾಗಿದೆ.
ಪ್ರಕರಣಗಳು ಆಯೋಗದ ಮುಂದೆ ವಿಚಾರಣೆಯಂತೆ ಈ ಸಂದರ್ಭದಲ್ಲಿ ಗುತ್ತಿಗೆದಾರರು ನ್ಯಾಯಾಲಯಕ್ಕೂ ಹೋಗಿದ್ದಾರೆ. ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. ಗುತ್ತಿಗೆ ಕೆಲಸ ಮಾಡಲು ಹಿಂದೇಟು ಹಾಕಿದರೆ ಬೇರೆಯವರು ಬಂದು ಕೆಲಸ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಮಹಾತ ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ನೂರು ವರ್ಷ ಗತಿಸಿದ ಹಿನ್ನಲೆಯಲ್ಲಿ ಶತಮಾನೋತ್ಸವದ ಸಂದರ್ಭದಲ್ಲಿ ಸ್ವಚ್ಛತಾ ಪ್ರತಿಜ್ಞೆಯನ್ನು ಒಂದು ಸಾವಿರ ಶಾಲಾ ವಿದ್ಯಾರ್ಥಿಗಳಿಗೆ ಬೋಧಿಸಲಾಗುವುದು. ಈ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದಾಗಿ ಹೇಳಿದರು.
ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯನ್ನು ಸೆ.6 ರಂದು ಗೌರಿ ಹಬ್ಬದ ದಿನ ಉದ್ಘಾಟನೆ ಮಾಡಲಾಗುವುದು. ತಾವು ಜಲಸಂಪನೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಿ ಕಾಮಗಾರಿಗಳನ್ನು ಚುರುಕುಗೊಳ್ಳುವಂತೆ ಮಾಡಿದ್ದೇನೆ.
ಅಂತಿಮವಾಗಿ ಎಲ್ಲಾ ಟೀಕೆಗಳಿಗೂ ಉತ್ತರ ಎಂಬಂತೆ ಗೌರಿ ಹಬ್ಬದ ದಿನ ಗಂಗೆಯ ಪೂಜೆ ಮಾಡಲಾಗುತ್ತದೆ. ಆರು ಕಡೆ ಸಚಿವರು ರಾಹುಕಾಲಕ್ಕೂ ಮುನ್ನ ನೀರು ಹರಿಸಲು ಚಾಲನೆ ನೀಡಲಿದ್ದಾರೆ. 1205 ಮೀಟರ್‌ಗೆ ಮುಖ್ಯಮಂತ್ರಿಯವರು ಪ್ರಮುಖ ಸ್ಥಳದಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದುತಿಳಿಸಿದರು.
ಕೆಲವು ಭಾಗದಲ್ಲಿ ಯೋಜನೆಗಳು ಪೂರ್ಣಗೊಂಡಿಲ್ಲ. ಅರಣ್ಯ ಇಲಾಖೆ 502 ಎಕರೆ ಭೂಮಿಯನ್ನು ನೀಡಬೇಕಿದೆ. ಇದಕ್ಕೆ ಪರ್ಯಾಯವಾಗಿ ನಾವು ಭೂಮಿ ನೀಡಬೇಕಿದ್ದು, ಈವರೆಗೂ 452 ಎಕರೆಯನ್ನು ಒದಗಿಸಲಾಗಿದೆ. ಒಟ್ಟಿನಲ್ಲಿ 2027 ರ ವೇಳೆಗೆ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.