ಬೆಂಗಳೂರು, ಸೆ.6– ರಾಜ್ಯದ ರಾಮನಗರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ ಮೂವರು ಯುವಕರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.
ರಾಮನಗರ:
ರಾಮನಗರ ಕಡೆಯಿಂದ ಬಿಡದಿ ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದ ಕಾರ್ಮಿಕರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಗುರುಮೂರ್ತಿ(39), ಶೇಕ್ ಅಫೀಸ್(35) ಮತ್ತು ವೆಂಕಟೇಶ್(50) ಮೃತಪಟ್ಟ ಕಾರ್ಮಿಕರು. ಮತ್ತೊಬ್ಬ ಕಾರ್ಮಿಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಿಡದಿ ಕಡೆಗೆ ಇಂದು ಬೆಳಗ್ಗೆ 7.30ರ ಸುಮಾರಿಗೆ ಇಬ್ಬರು ಕಾರ್ಮಿಕರು ಹೋಗುತ್ತಿದ್ದಾಗ ಎದುರಿಗೆ ಸಿಕ್ಕ ಇನ್ನಿಬ್ಬರು ಕಾರ್ಮಿಕರ ಜೊತೆ ರಸ್ತೆ ಬದಿ ನಿಂತು ಮಾತನಾಡುತ್ತಿದ್ದಾಗ ಮಾಯಗಾನಹಳ್ಳಿ ಬಳಿ ಅತಿ ವೇಗವಾಗಿ ಬಂದ ಲಾರಿ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ರಾಮನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೂವರ ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯಪುರ:
ರಸ್ತೆ ದಾಟುತ್ತಿದ್ದ ಪಾದಚಾರಿಗಳಿಗೆ ಅತಿ ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸೇರಿದಂತೆ ಮೂವರು ಯುವಕರು ಮೃತಪಟ್ಟಿರುವ ಘಟನೆ ತಡರಾತ್ರಿ ಮುದ್ದೆಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೈಕ್ ಸವಾರ, ತಾಳಿಕೋಟೆ ತಾಲೂಕಿನ ಗೊಟಗುಣಕಿ ನಿವಾಸಿ ನಿಂಗರಾಜ(22), ಹಿಂಬದಿ ಸವಾರ ಅನಿಲ ಖೈನೂರ(23), ಪಾದಚಾರಿ ಕುಮಾರ(18) ಮೃತಪಟ್ಟ ಯುವಕರು. ಮತ್ತೊಬ್ಬ ಪಾದಚಾರಿ ರಾಯಪ್ಪ ಮಹಾಂತಪ್ಪ ಬಾಗೇವಾಡಿ(24) ಸ್ಥಿತಿ ಚಿಂತಾಜನಕವಾಗಿದೆ.
ಅಪಘಾತದ ತೀವ್ರತೆಯಿಂದಾಗಿ ನಾಲ್ವರು ಪಾದಚಾರಿಗಳು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿನ ಕುಂಟೋಜಿ ಜಾತ್ರೆಗೆ ಬಂದಿದ್ದವರು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ್ದಾರೆ. 11 ಗಂಟೆ ಸುಮಾರಿಗೆ ಮನೆಗೆ ಹೋಗಲು ರಸ್ತೆ ಬದಿ ಬೈಕ್ಗಳನ್ನು ನಿಲ್ಲಿಸಿ ಮೂತ್ರವಿಸರ್ಜನೆಗಾಗಿ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುದ್ದೆಬಿಹಾಳ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.