ನವದೆಹಲಿ,ಸೆ.9- ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ನ ನಿರ್ದೇಶನದ ಮೇರೆಗೆ ತನಿಖೆ ಆರಂಭಿಸಿರುವ ಜಾರಿ ನಿರ್ದೇಶನಾಲಯವು ಗುರುಗ್ರಾಂ ಮೂಲದ ಆಮ್ಟೆಕ್ ಆಟೋ ಲಿಮಿಟೆಡ್ ಕಂಪನಿಗೆ ಸೇರಿದ 5,115 ಕೋಟಿ ರೂ.ಗಳಷ್ಟು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ.
ಈ ಕಂಪನಿ ಸರ್ಕಾರಿ ಬ್ಯಾಂಕ್ಗಳಿಂದ 27,000 ಕೋಟಿ ರೂ.ಗಳನ್ನು ಅಕ್ರಮ ವರ್ಗಾವಣೆ ಮಾಡಿ ವಂಚನೆ ಎಸಗಿರುವ ಆರೋಪ ಹೊತ್ತಿದೆ.ಪ್ರವರ್ತಕ ಅರವಿಂದ್ ಧಾಮ್ ಅವರ ಆಮ್ಟೆಕ್ ಕಂಪನಿಯ ಸಮೂಹಕ್ಕೆ ಸೇರಿದ ಎಆರ್ಜಿ ಲಿಮಿಟೆಡ್, ಎಸಿಐಎಲ್ ಲಿಮಿಟೆಡ್, ಮೆಟಾಲಿಸ್ಟ್ ಫೋರ್ಜಿಂಗ್ ಲಿಮಿಟೆಡ್ ಮತ್ತು ಕಾಸ್ಟೆಕ್‌್ಸ ಟೆಕ್ನಾಲಜೀಸ್ ಲಿಮಿಟೆಡ್ ಕಂಪನಿಗಳೂ ವಂಚನೆಯಲ್ಲಿ ಶಾಮೀಲಾಗಿದೆ ಎಂದು ಆರೋಪಿಸಲಾಗಿದೆ.
ಈ ಮುನ್ನ ಐಡಿಬಿಪಿ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ನೀಡಿದ ದೂರಿನ ಮೇರೆಗೆ ಸಿಬಿಐ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿತ್ತು. ಧಾಮ್ ಮತ್ತು ಅವರ ಸಮೂಹ ಸಂಸ್ಥೆಗಳು ನಕಲಿ ಕಂಪನಿಗಳಿಗೆ ಬ್ಯಾಂಕ್ ಸಾಲವನ್ನು ಕೊಡಿಸಿದ್ದವು ಎಂದು ಈ ಬ್ಯಾಂಕ್ಗಳು ಆರೋಪಿಸಿದ್ದವು.
ಫೆಬ್ರವರಿಯಲ್ಲಿ ಆಮ್ಟೆಕ್ ಆಟೋ ಕಂಪನಿ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ಕಂಪನಿ ಭಾಗಿಯಾಗಿದ್ದ 27,000 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣ ಕುರಿತಂತೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.
ಇಡಿ ತನಿಖೆ ನಡೆಸಿದ ಬಳಿಕ 5,000 ಕೋಟಿ ರೂ.ಗಳಿಗೂ ಅಧಿಕ ಬ್ಯಾಂಕ್ ಮೊತ್ತವನ್ನು 500 ಕ್ಕೂ ಅಧಿಕ ನಕಲಿ ಕಂಪನಿಗಳಿಗೆ ವರ್ಗಾವಣೆ ಮಾಡಿಸಿದ್ದ ಹಣಕಾಸು ವಂಚನೆ ಹಗರಣ ಬಯಲಿಗೆ ಬಂದಿದ್ದು ಧಾಮ್ ಅವರನ್ನು ಜುಲೈ 9 ರಂದು ಬಂಧಿಸಲಾಯಿತು.
ಆರೋಪಿಯು ನಕಲಿ ಹಣಕಾಸು ದಾಖಲೆಗಳನ್ನು ಸೃಷ್ಟಿಸಿ ಖೋಟಾ ಆಸ್ತಿಗಳ ಸೃಷ್ಟಿ ಮಾಡಿ ತನ್ನ ಎಲ್ಲ ಕಂಪನಿಗಳನ್ನು ದಿವಾಳಿಯಾಗಿರುವುದಾಗಿ ಘೋಷಿಸಿಕೊಂಡಿದ್ದರು. ಈ ಕಂಪನಿಗಳ ದಿವಾಳಿ ಘೋಷಣಾ ನಿರ್ಣಯದ ವೇಳೆ ಬ್ಯಾಂಕ್ಗಳು ಶೇ.80ಕ್ಕೂ ಅಧಿಕ ಮೊತ್ತದ ವಂಚನೆಗೊಳಗಾಗಿದ್ದವು.
ತನ್ನ 500 ಕ್ಕೂ ಅಧಿಕ ನಕಲಿ ಕಂಪನಿಗಳನ್ನು ಬಳಸಿ ಧಾಮ್ ರಿಯಲ್ ಎಸ್ಟೇಟ್ ಮತ್ತು ಐಷಾರಾಮಿ ಆಸ್ತಿಗಳಲ್ಲಿ ಹಣಕಾಸು ಹೂಡಿಕೆ ಮಾಡಿದ್ದರು ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ. ಈ ಕಂಪನಿಗಳ ಆಸ್ತಿಯ ಫಲಾನುಭವಿ ಆಮ್ಟೆಕ್ ಗ್ರೂಪ್ನ ಪ್ರವರ್ತಕ ಮತ್ತು ಲಾಭದಾಯಕ ಮಾಲೀಕ ಅರವಿಂದ್ ಧಾಮ್ ಎಂದು ಇಡಿ ಹೇಳಿದೆ.
ಜಪ್ತಿಯಾದ 85 ಆಸ್ತಿಗಳು 2,675 ಕೋಟಿ ರೂ.ಗಳ ಮೌಲ್ಯ ಹೊಂದಿದ್ದು 13 ವಿವಿಧ ರಾಜ್ಯಗಳಲ್ಲಿ ಹರಡಿಕೊಂಡಿವೆ. ಇದರಲ್ಲಿ ದೆಹಲಿಯ ಪ್ರಮುಖ ಸ್ಥಳದಲ್ಲಿ ವಾಣಿಜ್ಯ ಆಸ್ತಿಗಳು ಮತ್ತು ತೋಟದ ಮನೆಗಳು, ಮಹಾರಾಷ್ಟ್ರದಲ್ಲಿ 200 ಹೆಕ್ಟೇರ್ಗಳ ಭೂಮಿ, ಹರಿಯಾಣ ಮತ್ತು ಪಂಜಾಬ್ನ ಗುರುಗಾವ್, ಚಂಡೀಗಢ, ರೇವಾರಿ ಮತ್ತು ಪಂಚಕುಲ ಸೇರಿದಂತೆ ಕೈಗಾರಿಕಾ ಪ್ರದೇಶಗಳು ವಸತಿ ಬಡಾವಣೆಗಳೂ ಒಳಗೊಂಡಂತೆ ನೂರಾರು ಎಕರೆಗಳ ಭೂಮಿ ಸೇರಿವೆ.
ಇದರ ಜೊತೆಗೆ ಅಧಿಕೃತ ಮತ್ತು ಅನಧಿಕೃತ ಕಂಪನಿಗಳಲ್ಲಿನ 2,353.46 ಕೋಟಿ ರೂ.ಗಳ ಷೇರುಗಳನ್ನೂ ಜಪ್ತಿ ಮಾಡಲಾಗಿದೆ. ಈ ಕಂಪನಿಗಳಲ್ಲಿ ಅಲಯನ್ಸ್ ಇಂಟಿಗ್ರೇಟೆಡ್ ಮೆಟಾಲಿಕ್ಸ್ ಲಿಮಿಟೆಡ್, ನ್ಯೂಟೈಮ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮುಂತಾದವೂ ಸೇರಿವೆ ಎಂದು ಇಡಿ ವಿವರಿಸಿದೆ.
ಈ ಎಲ್ಲ ಕಂಪನಿಗಳು ಅರವಿಂದ ಧಾಮ್ ಅವರ ಮಾಲೀಕತ್ವದ ಕೆಲ ಕಂಪನಿಗಳ ಮೂಲಕ ಹಣಕಾಸು ವಂಚನೆಯ ಅಪರಾಧದಲ್ಲಿ ನೇರವಾಗಿ ಭಾಗಿಯಾಗಿರುವುದಾಗಿ ಗುರುತಿಸಲಾಗಿದೆ ಎಂದು ಇಡಿ ನುಡಿದಿದೆ.