ಬೆಂಗಳೂರು, ಸೆ.10- ಡ್ರಗ್ಸ್ ನಿರ್ಮೂಲನೆಗಾಗಿ ಪಣತೊಟ್ಟಿರುವ ನಗರ ಪೊಲೀಸರು ವಿವಿಧೆಡೆ ದಾಳಿ ನಡೆಸಿ, 15 ಮಂದಿಯನ್ನು ಬಂಧಿಸಿ, 4.50 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ, ಮಹಿಳಾ ವಿದೇಶಿ ಪೆಡ್ಲರ್ ಸೇರಿದಂತೆ ಒಟ್ಟು 7 ಮಂದಿಯನ್ನು ಬಂಧಿಸಿ 2.99 ಕೋಟಿ ರೂ ಮೌಲ್ಯದ ಗಾಂಜಾ, ಹೆರಾಯಿನ್ ಇನ್ನಿತರ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ವಿವೇಕನಗರ:
ನಗರದ ರೋಸ್ ಗಾರ್ಡನ್ ಬಳಿ ಗಾಂಜಾವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ತಂಡ ಮನೆಯ ಮೇಲೆ ದಾಳಿ ಮಾಡಿ, ಆರೋಪಿ ಡ್ರಗ್ಪೆಡ್ಲರ್ನ್ನು ಬಂಧಿಸಿ 10 ಲಕ್ಷ ಮೌಲ್ಯದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ ಎಲೆಕ್ಟ್ರಾನಿಕ್ ತೂಕದ ಯಂತ್ರ, ಮೊಬೈಲ್ ಫೋನನ್ನು ವಶಕ್ಕೆ ಪಡೆದಿದ್ದಾರೆ.
ಯಶವಂತಪುರ:
ಜೆ.ಪಿ.ಪಾರ್ಕ್ ಹತ್ತಿರವಿರುವ ಎಸ್.ಬಿ.ಎಂ ಕಾಲೋನಿಯಲ್ಲಿ ಹೆರಾಯಿನ್ನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ, ಮಣಿಪುರ ಮೂಲದ ಡ್ರಗ್ಪೆಡ್ಲರ್ನ್ನು ಬಂಧಿಸಿ, 75 ಲಕ್ಷ ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ.
ಈ ಆರೋಪಿಯು ನಗರದಲ್ಲಿರುವ ತನ್ನ ಸ್ನೇಹಿತನ ಸಹಾಯದಿಂದ ಹೇರಾಯಿನ್ನ್ನು ಖರೀದಿ ಮಾಡಿ, ಅವುಗಳನ್ನು ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಅಕ್ರಮ ಹಣದ ಸಂಪಾದನೆಯಲ್ಲಿ ತೊಡಗಿದ್ದದ್ದು. ವಿಚಾರಣೆಯಿಂದ ಗೊತ್ತಾಗಿದೆ.
ಸ್ನೇಹಿತನ ಬಂಧನ:
ಆರೋಪಿಯ ಸ್ನೇಹಿತನನ್ನು ವಿವೇಕ್ನಗರದ ಕಾಂಪ್ಲೆಕ್‌್ಸ ಬಳಿ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.
ವಿದ್ಯಾರಣ್ಯಪುರ:
ಇಲ್ಲಿನ 8ನೇ ಇ ಮೈನ್ನಲ್ಲಿರುವ ವಾಸದ ಮನೆಯೊಂದರಲ್ಲಿ ದೇಶಿ ಮಹಿಳಾ ಡ್ರಗ್ಪೆಡ್ಲರ್, ಎಂಡಿಎಂಎ ಕ್ರಿಸ್ಟಲ್ನ್ನು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರದ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ತಂಡವು ದಾಳಿ ಮಾಡಿ, ವಿದೇಶಿ ಮಹಿಳಾ ಡ್ರಗ್ಪೆಡ್ಲರ್ನ್ನು ಬಂಧಿಸಿ 10 ಲಕ್ಷ ಮೌಲ್ಯದ ಮಾಲನ್ನು ಜಪ್ತಿ ಮಾಡಿದೆ.
ಈಕೆ 2019ರಲ್ಲಿ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ಡ್ರಗ್ಪೆಡ್ಲಿಂಗ್ನಲ್ಲಿ ತೊಡಗಿಕೊಂಡಿದ್ದರಿಂದ ಈ ಹಿಂದೆ 2023 ನೇ ಸಾಲಿನಲ್ಲಿ ಈಕೆಯ ವಿರುದ್ದ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಪ್ರಕರಣದ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನು ಪಡೆದು ಹೊರಬಂದು ಮತ್ತೆ ಡ್ರಗ್ಪೆಡ್ಲಿಂಗ್ನಲ್ಲಿ ತೊಡಗಿರುವುದು ವಿಚಾರಣೆಯಿಂದ ಗೊತ್ತಾಗಿದೆ.
ಹೆಚ್.ಎಸ್.ಆರ್ ಲೇಔಟ್:
ಇಂಡಿಯನ್ ಪೋಸ್ಟ್ ಆಫೀಸ್ ಮೂಲಕ ಬೆಲ್ಜಿಯಂ ದೇಶದಿಂದ ನಿಷೇದಿತ ಮಾದಕ ವಸ್ತುಗಳನ್ನು ತರಿಸಿಕೊಂಡಿದ್ದ ನೆಲಮಂಗಲದ ನಿವಾಸಿ, ಖಾಸಗಿ ಕಂಪನಿ ಉದ್ಯೋಗಿಯನ್ನು ಬಂಧಿಸಿ, 1 ಕೋಟಿ 50 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಈತನ ಸ್ನೇಹಿತ ಬೆಲ್ಜಿಯಂ ದೇಶದಲ್ಲಿದ್ದು, ಈತನ ವಿರುದ್ಧ ತನಿಖೆ ಮುಂದುವರೆದಿದೆ.
ಹೆಚ್.ಎಸ್.ಆರ್ ಲೇಔಟ್:
ಕೇರಳ ಮೂಲದ ಡ್ರಗ್ಪೆಡ್ಲರ್ನನ್ನು ಸಿಸಿಬಿ ತಂಡ ಬಂಧಿಸಿ 50 ಲಕ್ಷ ಮೌಲ್ಯದ ಹೈಡ್ರೋಗಾಂಜಾ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ ತೂಕದ ಯಂತ್ರ, ಬ್ಯಾಗ್, ಮೊಬೈಲ್ ಪೋನ್ನ್ನು ವಶಪಡಿಸಿಕೊಂಡಿದ್ದು, ಈತನ ಸ್ನೇಹಿತ ತಲೆಮರೆಸಿಕೊಂಡಿದ್ದು ತನಿಖೆ ಮುಂದುವರೆದಿದೆ.
ಈ ಎಲ್ಲಾ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂಧಿ ತಂಡವು ಯಶಸ್ವಿಯಾಗಿ ಕೈಗೊಂಡಿದೆ.
ನಗರ ಪೊಲೀಸರ ಕಾರ್ಯಾಚರಣೆ :
ನಿಷೇಧಿತ ಮಾದಕ ವಸ್ತು ಹೈಡ್ರೋ ಗಾಂಜಾವನ್ನು ವಿದೇಶದಿಂದ ಆಮದು ಮಾಡಿಕೊಂಡು, ಕಾಲೇಜು ವಿದ್ಯಾರ್ಥಿಗಳಿಗೆ, ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್ನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿ 1 ಕೋಟಿ 22 ಲಕ್ಷ ಮೌಲ್ಯದ 2 ಕೆ.ಜಿ 770 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಹಿಮಾಚಲ ಪ್ರದೇಶಕ್ಕೆ ಆಗಾಗ್ಗೆ ಡಿ.ಜೆ ಪಾರ್ಟಿ ಮಾಡಲು ಹೋಗುತ್ತಿದ್ದು, ಆ ಸಮಯದಲ್ಲಿ ಕೇರಳ ಮೂಲದ ವ್ಯಕ್ತಿಯ ಪರಿಚಯವಾಗಿದ್ದು, ಈತನಿಂದ ಥಾಯ್ಲೆಂಡ್ ದೇಶದಿಂದ ನಿಷೇದಿತ ಮಾದಕ ವಸ್ತುವಾದ ಹೈಡ್ರೋ ಗಾಂಜಾವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಪ್ಯಾಕ್ ಮಾಡಿ, ಬೇಕರಿ ಐಟಂ ಬಾಕ್‌್ಸಗಳಲ್ಲಿ ತುಂಬಿ, ಅವುಗಳನ್ನು ಬಿಸ್ಕೆಟ್, ಚಾಕ್ಲೇಟ್ ಎಂದು ವಿಮಾನದ ಮೂಲಕ ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದುದ್ದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಯ ಸ್ನೇಹಿತ, ಕೇರಳ ಮೂಲದ ವ್ಯಕ್ತಿಯು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಸುಬ್ರಮಣ್ಯಪುರ:
ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆ, ಪಟಾಲಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ಆಟದ ಮೈದಾನದ ಕಾಂಪೌಂಡ್ ಪಕ್ಕದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬ್ಯಾಗ್ವೊಂದರಲ್ಲಿ ಗಾಂಜಾವನ್ನು ಇಟ್ಟುಕೊಂಡು, ಪ್ಯಾಕೆಟ್ ಕವರ್ನಲ್ಲಿ ಹಾಕಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 1.25 ಲಕ್ಷ ರೂ. ಮೌಲ್ಯದ ಸುಮಾರು 3 ಕೆ.ಜಿ 790 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಹೆಣ್ಣೂರು:
ನಿಷೇದಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ಮೂವರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ, 21ಲಕ್ಷ ಮೌಲ್ಯದ ಗಾಂಜಾ ಹಾಗೂ 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಈ ಮೂವರು ಆರೋಪಿಗಳನ್ನು ವಿಚಾರಣೆ ಮಾಡಿದಾಗ ಆರೋಪಿಗಳಿಗೆ ಅಪರಿಚಿತನೊಬ್ಬ ಕಡಿಮೆ ಬೆಲೆಗೆ ಗಾಂಜಾವನ್ನು ನೀಡಿದ್ದು, ಅದನ್ನು ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾರೆ.
ಬಾಣಸವಾಡಿ:
ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ತರುತ್ತಿದ್ದ ಮಾಹಿತಿಯ ಆಧಾರದ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಎಸ್.ಎಂ.ವಿ.ಟಿ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ಗಾಂಜಾವಿದ್ದ ಬ್ಯಾಗ್ ಸಮೇತ ಬಂಧಿಸಿದ್ದಾರೆ.
ಇಂದಿರಾನಗರ :
ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟೆಲ್ಗಳನ್ನುಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ವ್ಯಕ್ತಿಯೊಬ್ಬನನ್ನು ಬಂಧಿಸಿ, 2.34 ಲಕ್ಷ ರೂ. ಮೌಲ್ಯದ 78 ಗ್ರಾಂ ಎಂ.ಡಿ.ಎಂ.ಎಕ್ರಿಸ್ಟೆಲ್ಗಳ ವಶಪಡಿಸಿಕೊಂಡಿದ್ದಾರೆ.ಕೇರಳ ರಾಜ್ಯದ ಕಾಸರಗೂಡಿನಿಂದ ಕಡಿಮೆ ಬೆಲೆಗೆ ನಿಷೇದಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟೆಲ್ಗಳನ್ನು ತಂದು ಸಾರ್ವಜನಿಕರಿಗೆ ಮಾರಾಟ ಮಾಡಿ, ಹೆಚ್ಚಿನ ಹಣ ಸಂಪಾದನೆ ಮಾಡುವ ಸಲುವಾಗಿ ಈ ಕೃತ್ಯವೆಸಗಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಜೆ.ಬಿ.ನಗರ:
ಹೊರ ರಾಜ್ಯದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು 3ಲಕ್ಷ ಮೌಲ್ಯದ 2 ಕೆ.ಜಿ 800 ಗ್ರಾಂ ಗಾಂಜಾ, 1 ದ್ವಿ-ಚಕ್ರ ವಾಹನ, 8,500 ನಗದು ಹಾಗೂ 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಒಡಿಸ್ಸಾ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾವನ್ನು ತಂದು, ಅದನ್ನು ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದದ್ದು ವಿಚಾರಣೆಯಿಂದ ಗೊತ್ತಾಗಿದೆ.