Friday, September 20, 2024
Homeರಾಜ್ಯನಾಗಮಂಗಲದಲ್ಲಿ ಧರ್ಮಾಂಧರ ಅಟ್ಟಹಾಸಕ್ಕೆ 2.66 ಕೋಟಿ ರೂ. ನಷ್ಟ, ಬೀದಿಗೆ ಬಂದ ವ್ಯಾಪಾರಿಗಳ ಬದುಕು

ನಾಗಮಂಗಲದಲ್ಲಿ ಧರ್ಮಾಂಧರ ಅಟ್ಟಹಾಸಕ್ಕೆ 2.66 ಕೋಟಿ ರೂ. ನಷ್ಟ, ಬೀದಿಗೆ ಬಂದ ವ್ಯಾಪಾರಿಗಳ ಬದುಕು

Rs.2.66 Crore loss due to Nagamangala Communal Riots

ಮಂಡ್ಯ,ಸೆ.18- ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನಾ ವೇಳೆ ನಡೆದ ಗಲಭೆಯಲ್ಲಿ ಸುಟ್ಟು ಕರಕಲಾದ ಅಂಗಡಿಗಳ ಮಾಲೀಕರು ಹಾಗೂ ಕಾರ್ಮಿಕರ ಬದುಕು ಬೀದಿಗೆ ಬಂದಿದ್ದು, ಒಟ್ಟು 2.66 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಮಂಡ್ಯ ಜಿಲ್ಲಾಡಳಿತ ಗಲಭೆಯಿಂದ ನಷ್ಟವಾಗಿರುವ ಆಸ್ತಿ ಮೌಲ್ಯವನ್ನು ಅಂದಾಜಿಸುತ್ತಿದ್ದು, ಸದ್ಯ ಇವರಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ.

ನಾಗಮಂಗಲದ ಗಲಭೆಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಇಡೀ ಪಟ್ಟಣದಲ್ಲಿ ಅಶಾಂತಿ ಉಂಟಾದರೆ, ಇದರಿಂದ ಹಲವು ಜನರ ಬದುಕು ಬೀದಿಗೆ ಬಂದಿದೆ. ತಮ ಬದುಕು ರೂಪಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ಇಲ್ಲಿನ ಜನರು ತಮಗಿಷ್ಟದ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದರು. ಇದೀಗ ಕೋಮು ದಳ್ಳುರಿಗೆ ಗಲಭೆಕೋರರು ಹಚ್ಚಿದ ಬೆಂಕಿಯಿಂದ ಇಲ್ಲಿನ ಹಲವು ವ್ಯಾಪಾರಿಗಳ ಕನಸು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.

ಇದರಿಂದ ಈ ವ್ಯಾಪಾರವನ್ನೇ ನಂಬಿಕೊಂಡಿದ್ದ ಜನರ ಬದುಕು ಬೀದಿಗೆ ಬಂದಿದೆ. ಸದ್ಯ ಈ ಜನರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ವೈಯಕ್ತಿಕವಾಗಿ ಒಂದಿಷ್ಟು ಪರಿಹಾರ ನೀಡಿದ್ದಾರೆ. ಈ ಬೆನ್ನಲ್ಲೇ ರಾಜ್ಯಸರ್ಕಾರವೂ ಹಾನಿಗೊಳಗಾದ ಮಾಲೀಕರು ಹಾಗೂ ವ್ಯಾಪಾರಸ್ಥರಿಗೆ ಪರಿಹಾರ ನೀಡಲು ಮುಂದಾಗಿದೆ. ಈ ಸಂಬಂಧ ಮಂಡ್ಯ ಜಿಲ್ಲಾಡಳಿತ ಸಮೀಕ್ಷೆ ಮಾಡಿ ಹಾನಿಯಾದ ಕಟ್ಟಡ ಹಾಗೂ ವಸ್ತುಗಳಿಗೆ ಮೌಲ್ಯವನ್ನು ಅಂದಾಜು ಮಾಡಿ ವರದಿಯೊಂದನ್ನು ಸಿದ್ಧಪಡಿಸಿದೆ.

ಈ ಸಂಬಂಧ ನಾಗಮಂಗಲ ತಹಸೀಲ್ದಾರ್‌ ನೇತೃತ್ವದಲ್ಲಿ ಪಿಡಬ್ಲ್ಯೂಡಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಒಂದು ತಂಡ ರಚನೆ ಮಾಡಲಾಗಿತ್ತು. ಈ ತಂಡ ಎಸ್‌‍ಆರ್‌ ರೇಟ್‌ ಪ್ರಕಾರ ಗಲಭೆಯಿಂದ ಹಾನಿಗೆ ಒಳಗಾಗಿರುವ ಕಟ್ಟರ ಪ್ರಮಾಣ ಮೌಲ್ಯ 1.47 ಕೋಟಿ ರೂ. ಹಾಗೂ ಬೆಂಕಿಯ ಕೆನ್ನಾಲೆಗೆ ಸುಟ್ಟು ಕರಕಲಾದ ಸರಕಿನ ಮೌಲ್ಯ 1.18 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ನೀಡಿ ಸೂಕ್ತ ಪರಿಹಾರ ನೀಡುವಂತೆ ಮಂಡ್ಯ ಡಿಸಿ ಡಾ.ಕುಮಾರ್‌ ಮನವಿ ಮಾಡಿದ್ದಾರೆ.

ನಾಗಮಂಗಲ ಗಲಭೆಯಿಂದ ಅಪಾರ ಪ್ರಮಾಣ ಕಟ್ಟಡ ಹಾಗೂ ಸರಕುಗಳು ಹಾನಿಯಾಗಿವೆ. ಸರ್ಕಾರ ಈ ವರದಿಯನ್ನು ಆಧರಿಸಿ ಎಷ್ಟು ಪರಿಹಾರವನ್ನು ಘೋಷಣೆ ಮಾಡಲಿದೆಯೋ ಎನ್ನುವುದನ್ನು ಕಾದು ನೋಡಬೇಕಿದೆ.

RELATED ARTICLES

Latest News