Friday, September 20, 2024
Homeರಾಜಕೀಯ | Politicsಚನ್ನಪಟ್ಟಣ ಉಪಚುನಾವಣೆ : ಟಿಕೆಟ್ ಆಕಾಂಕ್ಷಿ ಯೋಗೇಶ್ವರ್‌ಗೆ ಬಿಜೆಪಿ ಹೈಕಮಾಂಡ್‌ನಿಂದ ಹೊಸ ಆಫರ್

ಚನ್ನಪಟ್ಟಣ ಉಪಚುನಾವಣೆ : ಟಿಕೆಟ್ ಆಕಾಂಕ್ಷಿ ಯೋಗೇಶ್ವರ್‌ಗೆ ಬಿಜೆಪಿ ಹೈಕಮಾಂಡ್‌ನಿಂದ ಹೊಸ ಆಫರ್

Channapatna by-election: BJP high command new offer to ticket aspirant Yogeshwar

ಬೆಂಗಳೂರು,ಸೆ.20- ಯಾವುದೇ ಕ್ಷಣದಲ್ಲಿ ನಡೆಯಬಹುದಾದ ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಆಕಾಂಕ್ಷಿಯಾಗಿರುವ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಅವರಿಗೆ ಬಿಜೆಪಿ ಹೈಕಮಾಂಡ್‌ ನಿಗಮ ಮಂಡಳಿ ಆಫರ್‌ ನೀಡಿದೆ.

ಕೇಂದ್ರದ ಪ್ರಮುಖ ಇಲಾಖೆಯೊಂದರ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡುವ ಆಶ್ವಾಸನೆಯನ್ನು ಕೊಟ್ಟಿರುವ ದೆಹಲಿ ನಾಯಕರು ಉಪಚುನಾವಣೆಯಲ್ಲಿ ಟಿಕೆಟ್‌ ಕೈ ತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಯೋಗೇಶ್ವರ್‌ ಅವರನ್ನು ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಕೇಂದ್ರ ರೇಷೆ ಮಂಡಳಿ, ರೈಲ್ವೆ ಇಲಾಖೆ, ಕೈಗಾರಿಕೆ ಸೇರಿದಂತೆ ಪ್ರಮುಖ ಇಲಾಖೆ ವ್ಯಾಪ್ತಿಗೆ ಬರುವ ನಿಗಮ ಮಂಡಳಿಗೆ ನಿಮನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತೇವೆ. ಇನ್ನು ಮೂರು ವರ್ಷ ವಿಧಾನಪರಿಷತ್‌ ಸ್ಥಾನವು ಮುಂದುವರೆಯಲಿದೆ. ಆತುರಕ್ಕೆ ಬಿದ್ದು ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸಲಹೆ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಯೋಗೀಶ್ವರ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರನ್ನು ಭೇಟಿ ಮಾಡಿದ ವೇಳೆ, ತಮಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಟಿಕೆಟ್‌ ನೀಡಬೇಕೆಂದು ಮನವಿ ಮಾಡಿದ್ದರು.

ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಉಪನಾಯಕ ಅರವಿಂದ ಬೆಲ್ಲದ್‌ ಸೇರಿದಂತೆ ರಾಜ್ಯದ ನಾಯಕರ ಸಮುಖದಲ್ಲಿ ನಡೆದ ಮಾತುಕತೆ ವೇಳೆ ಯೋಗೇಶ್ವರ್‌ ಅವರು ಪಕ್ಷದಿಂದ ಬಿಟ್ಟು ಹೋಗದಂತೆ ನಡ್ಡ ಅವರು ಸೂಚನೆ ಕೊಟ್ಟಿದ್ದರು.

ಅವರಿಗೆ ಟಿಕೆಟ್‌ ಕೈ ತಪ್ಪಿದರೆ ಕಾಂಗ್ರೆಸ್‌‍ ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಬಹುದು. ಹೀಗಾಗುವುದನ್ನು ತಡೆಗಟ್ಟಲು ಕೇಂದ್ರದ ನಿಗಮ ಮಂಡಳಿಯಲ್ಲಿ ಹುದ್ದೆ ನೀಡುವಂತೆ ರಾಜ್ಯ ನಾಯಕರು ಮಾಡಿಕೊಂಡ ಮನವಿಗೆ ನಡ್ಡ ಸಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲಿ ಬಿಜೆಪಿ ನಾಯಕರು ಮಾತುಕತೆ ನಡೆಸಿದ ವೇಳೆ ಯೋಗೇಶ್ವರ್‌ ಚನ್ನಪಟ್ಟಣದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭವಾಗುತ್ತದೆ ಎಂದು ಖುದ್ದು ಕುಮಾರಸ್ವಾಮಿಯವರೇ ಆತಂಕ ವ್ಯಕ್ತಪಡಿಸಿದ್ದರು.

ಯೋಗೇಶ್ವರ್‌ ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ಜೆಡಿಎಸ್‌‍, ಬಿಜೆಪಿ ಮೈತ್ರಿಕೂಟಕ್ಕೆ ಹೊಡೆತ ಬೀಳಲಿದ್ದು, ಇದರ ಲಾಭವನ್ನು ಕಾಂಗ್ರೆಸ್‌‍ ಪಡೆದುಕೊಳ್ಳಲಿದೆ. ಒಕ್ಕಲಿಗ ಮತಗಳನ್ನು ಮೂವರು ಹಂಚಿಕೊಂಡರೆ ಹಿಂದುಳಿದ ಮತ್ತು ಮುಸ್ಲಿಂ ಮತಗಳು ಕಾಂಗ್ರೆಸ್‌‍ಗೆ ಸಾರಸಗಾಟಾಗಿ ಹೋಗಲಿದೆ. ಹೀಗಾಗದಂತೆ ಯೋಗೇಶ್ವರ್‌ಗೆ ಮನವೊಲಿಸಿ ಕೇಂದ್ರದ ನಿಗಮಮಂಡಳಿಯಲ್ಲಿ ಸ್ಥಾನ ನೀಡಲು ವರಿಷ್ಠರನ್ನು ಮನವೊಲಿಸುವಂತೆ ಎಚ್‌ಡಿಕೆ ಬಿಜೆಪಿ ನಾಯಕರಿಗೆ ಸಲಹೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೈತ್ರಿ ಮುರಿದುಕೊಳ್ಳಲು ಒಪ್ಪದ ನಡ್ಡ:
ಇನ್ನು ಮಹತ್ವದ ಸಂದರ್ಭದಲ್ಲಿ ಜೆ.ಪಿ.ನಡ್ಡ ಅವರು ಕರ್ನಾಟಕದಲ್ಲಿ ಜೆಡಿಎಸ್‌‍ ಜೊತೆ ಮೈತ್ರಿ ಮುರಿದುಕೊಳ್ಳಬಾರದೆಂದು ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌‍ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ ಹಳೇ ಮೈಸೂರು ಭಾಗದ 14 ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ ಮೈತ್ರಿಕೂಟ 12 ಸ್ಥಾನಗಳನ್ನು ಗೆದ್ದಿದೆ. ಈ ಭಾಗದ ಜನರು ಬಿಜೆಪಿ-ಜೆಡಿಎಸ್‌‍ ಮೈತ್ರಿಯನ್ನು ಒಪ್ಪಿಕೊಂಡಿದ್ದಾರೆ.

ಸರಿಸುಮಾರು 100 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌‍ ಜೊತೆ ಮೈತ್ರಿ ಮಾಡಿಕೊಂಡರೆ ಪರೋಕ್ಷವಾಗಿ ಬಿಜೆಪಿಗೆ ಲಾಭವಾಗಲಿದೆ. ಹೀಗಾಗಿ ಜೆಡಿಎಸ್‌‍ ಜೊತೆ ಮೈತ್ರಿ ಮುಂದುವರೆಯಲೇಬೇಕೆಂದು ತಾಕೀತು ಮಾಡಿದ್ದಾರೆ.

ಕಾಂಗ್ರೆಸ್‌‍ ಹಿಮೆಟ್ಟಿಸಬೇಕಾದರೆ ಜೆಡಿಎಸ್‌‍ ಮೈತ್ರಿ ಅನಿವಾರ್ಯ. ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌‍ಗೆ ಬಿಟ್ಟುಕೊಡಲಿದ್ದು, ಸಂಡೂರು ಮತ್ತು ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ. ಎರಡು ಪಕ್ಷಗಳ ನಡುವೆ ಯಾವುದೇ ರೀತಿಯ ಗೊಂದಲ ಇಲ್ಲದಂತೆ ಸೌರ್ಹಾದಯುತವಾಗಿ ನಡೆದುಕೊಳ್ಳಬೇಕೆಂದು ನಡ್ಡಾ ಅವರು ರಾಜ್ಯ ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

RELATED ARTICLES

Latest News