ಬೆಂಗಳೂರು,ಸೆ.26-ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಉಪನಾಯಕ ಅರವಿಂದ್ ಬೆಲ್ಲದ್, ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಅರಗ ಜ್ಞಾನೇಂದ್ರ, ಸುನೀಲ್‌ಕುಮಾರ್, ಜನಾರ್ಧನ ರೆಡ್ಡಿ, ಗೋಪಾಲಯ್ಯ, ಸಿದ್ದು ಸವದಿ, ಬಿ.ಸಿ.ಪಾಟೀಲ್ ಸೇರಿದಂತೆ ಬಹುತೇಕ ಎಲ್ಲಾ ಶಾಸಕರು ಭಾಗಿಯಾಗಿದ್ದರು.
ಅನಾರೋಗ್ಯದ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗೈರು ಹಾಜರಾಗಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಹುತೇಕ ಶಾಸಕರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ರಾಜೀನಾಮೆಗೆ ಒತ್ತಾಯಿಸಿದರು. ಬೇಕೇ ಬೇಕು ರಾಜೀನಾಮೆ ಬೇಕು. ಕೊಡಬೇಕು, ಕೊಡಬೇಕು ರಾಜೀನಾಮೆ ಕೊಡಬೇಕು, ಮುಡಾ ಸೈಟು ಹೊಡೆದ ಸಿದ್ದರಾಮಯ್ಯ, ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕೂಗಿ ರಾಜೀನಾಮೆಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬಹುತೇಕ ನಾಯಕರು ನ್ಯಾಯಾಲಯವೇ ಎಫ್‌ಐಆರ್ ದಾಖಲಿಸಲು ಸಿದ್ದರಾಮಯ್ಯ ವಿರುದ್ಧ ಆದೇಶ ನೀಡಿದೆ. ಇನ್ಯಾವ ಮುಖ ಹೊತ್ತು ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎಂದು ಪ್ರಶ್ನೆ ಮಾಡಿದರು. ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಮುಂದುವರೆಯಲು ಭಂಡತನ ತೋರಬಾರದು. 40 ವರ್ಷ ರಾಜಕೀಯ ಜೀವನದಲ್ಲಿ ನನ್ನ ವಿರುದ್ಧ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುತ್ತಿದ್ದ ಅವರ ಮುಖಕ್ಕೆ ಈಗ ಅಳಿಸಲಾಗದ ದೊಡ್ಡ ಕಪ್ಪುಚುಕ್ಕೆ ಅಂಟಿಕೊಂಡಿದೆ. ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾನಿರತರು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರಿಗೆ ದೇಶದ ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ಪ್ರಕರಣದಲ್ಲಿ ಅವರ ಪಾತ್ರ ಏನೂ ಇಲ್ಲ ಎಂದು ಸಾಬೀತಾದರೆ ಪುನಃ ಅವರೇ ಅಧಿಕಾರದಲ್ಲಿ ಮುಂದುವರೆಯಲಿ. ಅವರು ಅಧಿಕಾರದಲ್ಲಿರುವಾಗ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ನೀಡಲಿ. ಇಲ್ಲದಿದ್ದರೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಶಾಸಕರು ವಿಧಾನಸೌಧದೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಕೆಂಗಲ್ ಗೇಟ್ ಬಳಿಯೇ ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಬಿಜೆಪಿ ನಾಯಕರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದರಲ್ಲದೆ, ತೀವ್ರ ಪ್ರತಿಭಟನೆಗಿಳಿದ ಅಶೋಕ್, ಛಲವಾದಿ, ಸಿಟಿ ರವಿ, ಸುನೀಲ್ ಕುಮಾರ್ ಸೇರಿ ಹಲವು ನಾಯಕರನ್ನು ಹೊತ್ತೊಯ್ದ ಬಸ್‌ನೊಳಗೆ ಬಲವಂತವಾಗಿ ನುಗ್ಗಿಸಿದರು.