ಬೆಂಗಳೂರು,ಸೆ.26- ಮುಡಾ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ರಾಜಕೀಯ ಪ್ರೇರಿತ ಎಂದು ಹೇಳಿರುವ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ದೂರುದಾರ ಟಿ.ಜೆ.ಅಬ್ರಹಾಂ ಹೇಳಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್ ಅಹಮದ್, ಮುಡಾ ಪ್ರಕರಣದಲ್ಲಿ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ನೀಡಿರುವ ತೀರ್ಪು ರಾಜಕೀಯ ಪ್ರೇರಿತ ಎಂದು ವಿವಾದಾತಕ ಹೇಳಿಕೆ ನೀಡಿದ್ದರು.
ಈಗ ಜಮೀರ್ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡಿರುವ ಅಬ್ರಹಾಂ ಅವರ ವಿರುದ್ಧ ಶುಕ್ರವಾರ ಅಥವಾ ಶನಿವಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು. ಜಮೀರ್ ಅಹಮದ್ ಸಾಮಾನ್ಯ ವ್ಯಕ್ತಿಯಲ್ಲ. ಅವರೊಬ್ಬ ಜನಪ್ರತಿನಿಧಿ. ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ನ್ಯಾಯಾಲಯದ ತೀರ್ಪಿನ ಬಗ್ಗೆ ಮಾತನಾಡಬೇಕು. ಇದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಅತ್ಯಂತ ದುರದೃಷ್ಟಕರ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಹೂಡುತ್ತೇವೆ ಎಂದು ಎಚ್ಚರಿಸಿದರು.
ಜಮೀರ್ ಅಹಮದ್‌ಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಏನು ಮಾತನಾಡುತ್ತೇನೆಂಬ ಪರಿಜ್ಞಾನವೂ ಇಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಏನ ಮಾತನಾಡುತ್ತಿದ್ದೇನೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ. ನ್ಯಾಯಾಲಯದ ಮೂಲಕವೇ ಅವರಿಗೆ ಪಾಠ ಕಲಿಸಬೇಕೆಂದು ಅಬ್ರಹಾಂ ಗುಡುಗಿದ್ದಾರೆ. ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದ ಜಮೀರ್ ಅಹಮದ್ ಇದು ರಾಜಕೀಯ ಪ್ರೇರಿತ ತೀರ್ಪಾಗಿದೆ. ನಮಗೆ ಹೈಕೋರ್ಟ್ ನೀಡಿರುವ ಆದೇಶ ಸಮಾಧಾನ ತಂದಿಲ್ಲ ಎಂದು ಪರೋಕ್ಷವಾಗಿ ಅಸಮಾಧಾ ಹೊರಹಾಕಿದ್ದರು.