Sunday, September 29, 2024
Homeರಾಜ್ಯಸಿಎಂ ಆಯ್ತು ಈಗ ಸಚಿವರ ವಿರುದ್ಧ ಹಲವು ಸಚಿವರ ಬೆನ್ನುಬಿದ್ದ ಅಭಿಯೋಜನೆ ಭೂತ..?

ಸಿಎಂ ಆಯ್ತು ಈಗ ಸಚಿವರ ವಿರುದ್ಧ ಹಲವು ಸಚಿವರ ಬೆನ್ನುಬಿದ್ದ ಅಭಿಯೋಜನೆ ಭೂತ..?

Siddaramaiah Minister Priyank Kharge Rajanna

ಬೆಂಗಳೂರು, ಸೆ.29- ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ, ರಾಜ್ಯಸರ್ಕಾರದ ಹಲವು ಸಚಿವರ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರ ಮುಂದೆ ದೂರುಗಳು ಬಾಕಿ ಉಳಿದಿದ್ದು, ಯಾವುದೇ ಕ್ಷಣದಲ್ಲಾದರೂ ಪೂರ್ವಾನುಮತಿ ದೊರೆಯುವ ಸಾಧ್ಯತೆ ಇದೆ.

ಸಚಿವರಾದ ಎಂ.ಬಿ. ಪಾಟೀಲ್‌, ಕೆ.ಎನ್‌. ರಾಜಣ್ಣ, ಪ್ರಿಯಾಂಕ ಖರ್ಗೆ ಅವರುಗಳ ವಿರುದ್ಧ ದೂರುಗಳು ರಾಜ್ಯಪಾಲರ ಕಛೇರಿಯಲ್ಲಿ ಪರಿಶೀಲನೆಗೆ ಒಳಪಡುತ್ತಿವೆ.ಒಂದು ವೇಳೆ ಪೂರ್ವಾನುಮತಿ ಕೊಟ್ಟಿದ್ದೆ ಆದರೆ, ರಾಜ್ಯ ಸರ್ಕಾರ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ.

ಸಾಮಾಜಿಕ ಕಾರ್ಯಕರ್ತ ಆದರ್ಶ ಆರ್‌ ಅಯ್ಯರ್‌ ಅವರ ಖಾಸಗಿ ದೂರು ಆಧರಿಸಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತರಾಮನ್‌ ಹಾಗೂ ಇತರರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ದೂರು ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಇದನ್ನು ದ್ವೇಷದ ರಾಜಕಾರಣ ಎಂದು ವಿಶ್ಲೇಷಿಸಲಾಗಿದೆ. ಕೆಂದ್ರ ಸಚಿರವರ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಪ್ರತಿಯಾಗಿ ರಾಜ್ಯಸರ್ಕಾರ ಸಚಿವರುಗಳ ವಿರುದ್ಧ ಇರುವ ದೂರುಗಳಿಗೆ ತ್ವರಿತ ಚಾಲನೆ ನೀಡುವ ಸಾಧ್ಯತೆಗಳಿವೆ.

ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿಯವರು ಸಚಿವರಾದ ಎಂ.ಬಿ. ಪಾಟೀಲ್‌, ಕೆ.ಎನ್‌. ರಾಜಣ್ಣ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಅಡಿಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಪೂರ್ವಾನುಮತಿಯ ಮಂಜೂರಾತಿ ಕೇಳಿದ್ದಾರೆ.

ಕೆಐಎಡಿಬಿಯಲ್ಲಿರುವ ನಾಗರಿಕ ಸೌಲಭ್ಯ ನಿವೇಶನಗಳು (ಸಿಎ)ನ್ನು ಹರಾಜು ಮೂಲಕ ಹಂಚಿಕೆ ಮಾಡುವ ಬದಲು, ನಿಯಮ ಪಾಲಿಸದೆ ಸಾಮಾನ್ಯ ದರದಲ್ಲಿ ಹಂಚಿಕೆ ಮಾಡಲಾಗಿದ್ದು, ಕೋಟ್ಯಂತ ರೂ. ನಷ್ಟ ಉಂಟುಮಾಡಲಾಗಿದೆ ಎಂದು ದೂರಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಹೈಟೆಕ್‌ ಡಿಫೆನ್ಸ್ ಅಂಡ್‌ ಏರೋಸ್ಪೇಸ್‌‍ ಪಾರ್ಕ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಫೆನ್ಸ್ ಅಂಡ್‌ ಏರೋಸ್ಪೇಸ್‌‍ ಪಾರ್ಕ್‌, ಸೋಂಪುರ ಒಂದನೇ ಹಂತ, ಎರಡನೇ ಹಂತ, ರಾಮನಗರ ಜಿಲ್ಲೆಯ ಬಿಡದಿ ಎರಡನೇ ಹಂತದ ಸೆಕ್ಟರ್‌, ಕೋಲಾರ ಜಿಲ್ಲೆಯ ನರಸಾಪುರ, ತುಮಕೂರಿನ ವಸಂತನರಸಾಪುರದ 1, 2, 3ನೇ ಹಂತ, ಧಾರವಾಡ ಜಿಲ್ಲೆಯ ಗಾಮನಗಟ್ಟಿ, ಜಿಗಣಿಯ 2ನೇ ಹಂತ, ಹಾರೋಹಳ್ಳಿ 3ನೇ ಹಂತ, ದೊಡ್ಡಬಳ್ಳಾಪುರ 3ನೇ ಹಂತ, ಮಾನ್ವಿ ನಂದಿಕೂರು ಕೈಗಾರಿಕಾ ಪ್ರದೇಶಗಳಲ್ಲಿ ಲಭ್ಯವಿದ್ದ ಸಿಎ ನಿವೇಶನಗಳ ಹಂಚಿಕೆಯನ್ನು ನಿಯಮ ಭಾಹಿರವಾಗಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ನಿವೇಶನ ಪಡೆದ ಸುಮಾರು 39 ಕಂಪನಿಗಳ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಭಾರಿ ಭ್ರಷ್ಟಚಾರ ಹಾಗೂ ಅಕ್ರಮಗಳು ನಡೆದಿವೆ ಎಂದು ಹೇಳಲಾಗಿದ್ದು, ಸಚಿವ ಎಂ.ಬಿ.ಪಾಟೀಲ್‌ ಅವರ ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಹೆಸರನ್ನು ನಮೂದಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ 17ಎ ಮತ್ತು 19ರ ಅಡಿ ಹಾಗೂ ಭಾರತೀಯ ನಾಗರಿಕ ಸುರಕ್ಷ ಸಂಹಿತೆ ಸೆಕ್ಷನ್‌ 218ರ ಅಡಿ ದೂರು ದಾಖಲಿಸಲು ಅನುಮತಿ ನೀಡುವಂತೆ ಆಗಸ್ಟ್‌ನಲ್ಲಿ ದೂರು ಸಲ್ಲಿಸಲಾಗಿದೆ.

ಅದೇ ರೀತಿ ಕರ್ನಾಟಕ ರಾಜ್ಯ ಅಫೆಕ್ಸ್ ನ ಬ್ಯಾಂಕ್‌ನಲ್ಲಿ ಕಳಂಕಿತ ವ್ಯಕ್ತಿಯನ್ನು ಗುತ್ತಿಗೆ ಆಧಾರದ ಮೇಲೆ ಸೇವೆಯಲ್ಲಿ ಮುಂದುವರೆಸಲು ಮಂಜೂರಾತಿ ನೀಡುವ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ವಿರುದ್ಧವೂ ಭ್ತಷ್ಟಾಚಾರ ನಿಗ್ರಹ ಕಾಯ್ದೆ 19 ಹಾಗೂ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಅಡಿಯಲ್ಲಿ ದೂರು ದಾಖಲಿಸಲು ಪೂರ್ವಾನುಮತಿ ಕೇಳಿದ್ದಾರೆ.

ರಾಜ್ಯ ಅಫೆಕ್‌್ಸ ಬ್ಯಾಂಕ್‌ ನಿರ್ದೇಶಕರಾಗಿದ್ದ ಸಿ.ಎನ್‌. ದೇವರಾಜ್‌ ಅವರು ಖಾಸಗಿ ವ್ಯಕ್ತಿಗಳು, ವಾಣಿಜ್ಯ ಸಂಸ್ಥೆಗಳು, ಟ್ರಸ್ಟ್‌ಗಳಿಗೆ ಯಾವುದೇ ಜಾಮೀನು ಮತ್ತು ಭದ್ರತೆ ಪಡೆಯದೆ ಸಾಲ ನೀಡಿದ್ದಾರೆ. ಕಟ್ಟಡ ನಿರ್ಮಾಣದ ಕಂಪನಿ, ಸಕ್ಕರೆ ಕಾರ್ಖಾನೆಗಳು, ಚಿನ್ನದ ಅಂಗಡಿಗಳು ಹಾಗೂ ಇತರ ವ್ಯವಹಾರಗಳಿಗೆ ಬೇಕಾಬೆಟ್ಟಿಯಾಗಿ ನೂರಾರು ಕೋಟಿರೂ.ಗಳನ್ನು ಸಾಲ ನೀಡಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆಗೂ ಆದೇಶಿಲಾಗಿದೆ.

ಸಹಕಾರ ಸಂಘಗಳ ಅಪರ ನಿಬಂಧಕರಾಗಿ ನಿವೃತ್ತರಾಗಿರುವ ದೇವರಾಜ್‌ ಅವರನ್ನು ಅಫೆಕ್‌್ಸ ಬ್ಯಾಂಕ್‌ಗೆ ವ್ಯವಸ್ಥಾಪಕ ನಿರ್ದೇಶಕರಾಗಿ 11 ತಿಂಗಳ ಅವಧಿಗೆ ನೇಮಕಾತಿ ಮಾಡಲಾಗಿದೆ. ಭ್ರಷ್ಟಚಾರ ಹಾಗೂ ವ್ಯಾಪಕ ಅವ್ಯವಹಾರದ ಆರೋಪ ಹೊತ್ತಿರುವ ದೇವರಾಜ್‌ ಅವರನ್ನು ಅಫೆಕ್‌್ಸ ಬ್ಯಾಂಕಿಗೆ ನೇಮಕ ಮಾಡಲು ಶಿಫಾರಸ್ಸು ಮಾಡಿರುವ ಸಚಿವ ಕೆ.ಎನ್‌.ರಾಜಣ್ಣ ಹಾಗೂ ಇತರರ ವಿರುದ್ಧ ದೂರು ದಾಖಲಿಸಲು ಪೂರ್ವಾನುಮತಿ ನೀಡುವಂತೆ ದಾಖಲಾತಿ ಸಹಿತವಾಗಿ ಅರ್ಜಿ ಸಲ್ಲಿಸಲಾಗಿದೆ.

ಸಚಿವ ಪ್ರಿಯಾಂಕ ಖರ್ಗೆ ಒಡೆತನದ ಸಂಸ್ಥೆಗೆ ನಿವೇಶನ ಪಡೆದಿರುವುದರಲ್ಲೂ ಲೋಪಗಳಾಗಿವೆ ಎಂದು ಆರೋಪಿಸಿ ದೂರು ದಾಖಲಿಸಲು ಸಾಮಾಜಿಕ ಕಾರ್ಯಕರ್ತರೊಬ್ಬರು ರಾಜ್ಯಪಾಲರಿಂದ ಪೂರ್ವಾನುಮತಿ ಕೇಳಿದ್ದಾರೆ.

ಹಲವು ಸಚಿವರ ವಿರುದ್ಧ ದೂರು ನೀಡಲಾಗಿದ್ದು, ಒಂದು ವೇಳೆ ರಾಜ್ಯಪಾಲರು ಪೂವಾನುಮತಿ ನೀಡುತ್ತಾ ಹೋದರೆ ಪೊಲೀಸ್‌‍ ಠಾಣೆಗಳ ಕಾರ್ಯದೊತ್ತಡ ಹೆಚ್ಚಾಗಲಿದೆ. ಸರ್ಕಾರಕ್ಕೆ ಕಳಂಕ ತೀವ್ರಗೊಳ್ಳಲಿದೆ. ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರದ ಸಂಘರ್ಷ ಮುಂದುವರೆದ ಭಾಗವಾಗಿ ಸಚಿವರು ಪೊಲೀಸ್‌‍ ಠಾಣೆಗೆ ಪೆರೇಡ್‌ ನಡೆಸುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ.

RELATED ARTICLES

Latest News