Friday, October 11, 2024
Homeರಾಜ್ಯರಾಜ್ಯದಲ್ಲಿ ಉತ್ತಮ ಮಳೆ ಸಾಧ್ಯತೆ : ಹವಾಮಾನ ಇಲಾಖೆಯಿಂದ ಯಲ್ಲೋ ಅಲರ್ಟ್‌

ರಾಜ್ಯದಲ್ಲಿ ಉತ್ತಮ ಮಳೆ ಸಾಧ್ಯತೆ : ಹವಾಮಾನ ಇಲಾಖೆಯಿಂದ ಯಲ್ಲೋ ಅಲರ್ಟ್‌

Yellow alert Issued from Meteorological Department

ಬೆಂಗಳೂರು. ಸೆ.29-ತೀವ್ರ ಮಳೆ ಕೊರತೆ ಉಂಟಾಗಿ ಬೆಳೆಗಳು ಒಣಗುವ ಪರಿಸ್ಥಿತಿ ತಲೆದೋರಿದ್ದ ಸಂದರ್ಭದಲ್ಲಿ ಮುಂಗಾರು ಚೇತರಿಕೆಯಾಗಿ ಮಳೆಯಾಗುತ್ತಿರುವುದು ರೈತರಲ್ಲಿ ಉತ್ಸಾಹ ಮೂಡಿಸಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇಂದು ಮತ್ತು ನಾಳೆ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ. ಹೀಗಾಗಿ ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

ಆಗಸ್ಟ್‌ನಂತೆ ಸೆಪ್ಟಂಬರ್‌ ತಿಂಗಳಲ್ಲೂ ಮಳೆ ಕಡಿಮೆಯಾಗಿತ್ತು. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಾತ್ರ ವಾಡಿಕೆ ಪ್ರಮಾಣದ ಮಳೆಯಾಗಿದೆ. ರಾಜ್ಯದ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಬೆಳೆಗಳು ಒಣಗುತ್ತಿದ್ದವು.

ಇಂತಹ ಸಂದರ್ಭದಲ್ಲಿ ಮುಂಗಾರು ಮಳೆ ಚೇತರಿಕೆಯಾಗಿ ಕಳೆದ ನಾಲ್ಕೈದು ದಿನಗಳಿಂದ ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಕೆಲವೆಡೆ ಮಳೆಯ ತೀವ್ರ ಕೊರತೆಯಾಗಿ ಮತ್ತೆ ಬರದ ಛಾಯೆ ಆವರಿಸುವ ಆತಂಕ ಎದುರಾಗಿತ್ತು.ಈ ಮಧ್ಯೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಈಗ ಮುಂಗಾರು ಚುರುಕಾಗಿದೆ. ಇದರಿಂದ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ. ಕರಾವಳಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ನೀಡಿದೆ.

ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು. ಮಿಂಚು ಹಾಗೂ ಬಲವಾದ ಮೇಲೈ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಮುನ್ಸೂಚನೆ ನೀಡಲಾಗಿದೆ. ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.ಸ್ಥಳೀಯ ಹವಾಮಾನ ಮುನ್ಸೂಚನೆ ಪ್ರಕಾರ ರಾಜಧಾನಿ ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಇಲ್ಲವೇ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸೆಪ್ಟೆಂಬರ್‌ ಒಂದರಿಂದ ನಿನ್ನೆವರೆಗೆ 148.2 ಮಿ.ಮೀ.ವಾಡಿಕೆ ಮಳೆಗೆ 119.7 ಮಿ.ಮೀ.ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.19ರಷ್ಟು ಕಡಿಮೆಯಾಗಿದೆ.ಅದೇ ರೀತಿ ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಶೇ.75ರಷ್ಟು ಹಾಗೂ ಉತ್ತರ ಒಳನಾಡಿನಲ್ಲಿ ಶೇ.25ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

RELATED ARTICLES

Latest News