Saturday, November 23, 2024
Homeರಾಜಕೀಯ | Politicsರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ರಣತಂತ್ರ

ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ರಣತಂತ್ರ

BJP's strategy for 3 assembly constituencies by-elections

ಬೆಂಗಳೂರು,ಅ.9- ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತು ಹರಿಯಾಣದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಗೆಲ್ಲಲು ವಿಶೇಷ ರಣತಂತ್ರ ರೂಪಿಸಿದೆ.

ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ಸದ್ಯದಲ್ಲೇ ದಿನಾಂಕವನ್ನು ಘೋಷಣೆ ಮಾಡಲಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿಯಾಗಲಿದೆ ಎಂದು ತಿಳಿದುಬಂದಿದೆ.

ಆಡಳಿತಾರೂಢ ಕಾಂಗ್ರೆಸ್ ಮತ್ತು ಎನ್‌ಡಿಎ ಮೈತ್ರಿಕೂಟವಾದ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿರುವ ಈ ಮೂರು ಕ್ಷೇತ್ರಗಳ ಉಪಚುನಾವಣೆಯನ್ನು ಗೆದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಮುಖಭಂಗ ಮಾಡಬೇಕೆಂಬ ಯೋಜನೆಯನ್ನು ರೂಪಿಸಲಾಗಿದೆ.

ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ರೀತಿಯ ಭಿನ್ನಮತವಿಲ್ಲದೆ ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಿದರೆ ಅಸಾಧ್ಯವನ್ನು ಸಾಧ್ಯವಾಗಿಸಬಹುದೆಂಬುದಕ್ಕೆ ಲೋಕಸಭಾ ಚುನಾವಣೆ -ಫಲಿತಾಂಶವೇ ಸಾಕ್ಷಿಯಾಗಿರುವುದರಿಂದ ಉಪಚುನಾವಣೆಯಲ್ಲಿ ಗೆಲ್ಲಲು ಕಾರ್ಯೋನ್ಮುಖವಾಗಿವೆ.

ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಉಂಟಾಗದಂತೆ ಉಭಯ ಪಕ್ಷಗಳ ಮುಖಂಡರು ಶೀಘ್ರದಲ್ಲೇ ಸಭೆ ಸೇರಿ ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದಾರೆ.

ಅದೇ ರೀತಿ ಹಾವೇರಿ ಜಿಲ್ಲೆ ಶಿಗ್ಗಾವಿ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಅಭ್ಯರ್ಥಿ ಘೋಷಣೆಯಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಹರಿಯಾಣ ಗೆಲುವು ಬಿಜೆಪಿಗೆ ನೈತಿಕ ಬಲವನ್ನು ಹೆಚ್ಚಿಸಿದ್ದು, ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಮುನ್ನಡೆದರೆ ಗೆಲುವು ಸಾಧ್ಯವಾಗಿಸಬಹುದೆಂದು ಸಂಘ ಪರಿಹಾರದ ಹಿರಿಯ ನಾಯಕರು ಸಲಹೆ ಮಾಡಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದೊಳಗಿನ ಗೊಂದಲ, ಪರಸ್ಪರ ಕಾಲೆಳೆಯುವಿಕೆ, ಅಭ್ಯರ್ಥಿ ಆಯ್ಕೆಯಲ್ಲಿ ಉಂಟಾದ ಬಿಕ್ಕಟ್ಟು ಹಲವಾರು ಕಾರಣಗಳಿಂದ ಪಕ್ಷಕ್ಕೆ ಸೋಲಾಗಿರಬಹುದು. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಮತದಾರರ ಮನವೊಲಿಕೆ ಮಾಡಿದರೆ ಗೆಲುವು ಸುಲಭವಾಗುತ್ತದೆ ಎಂಬ ಸಲಹೆ ಬಿಜೆಪಿ ಚಿಂತಕರ ಛಾವಡಿಯಿಂದ ಬಂದಿದೆ.

ನಿಮ್ಮ ನಿಮ್ಮಲ್ಲೇ ಕಿತ್ತಾಡಿಕೊಂಡರೆ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಕಾಂಗ್ರೆಸ್ ಮುನ್ನಡೆ ಸಾಧಿಸಬಹುದು. ಉಪಚುನಾವಣೆಯಲ್ಲಿ ಹಿನ್ನಡೆಯಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವಕ್ಕೆ ಇನ್ನಷ್ಟು ವಿಘ್ನ ಎದುರಾಗಲಿದೆ.

ಮೊದಲೇ ಮುಡಾ ಪ್ರಕರಣದಲ್ಲಿ ಸಿಲುಕಿರುವ ಅವರಿಗೆ ಉಪಚುನಾವಣೆ ಕಹಿ ಕುರ್ಚಿಗೆ ಕಂಟಕವಾಗಬಹುದು. ಬಿಜೆಪಿ ಗೆದ್ದರೆ ಸ್ಥಳೀಯ ಸಂಸ್ಥೆ, ಬಿಬಿಎಂಪಿ ಚುನಾವಣೆಯಲ್ಲಿ ಮತ್ತಷ್ಟು ಹುರುಪಿನಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಒಗ್ಗಟ್ಟಿನಿಂದ ಶ್ರಮಿಸಲು ಕಿವಿಮಾತು ಹೇಳಿದ್ದಾರೆ.

ಮೂಲಗಳ ಪ್ರಕಾರ ದೆಹಲಿಯಲ್ಲಿ ಶೀಘ್ರದಲ್ಲೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು ರಾಷ್ಟ್ರೀಯ ಮುಖಂಡರನ್ನು ಭೇಟಿ ಮಾಡಿ ಅಭ್ಯರ್ಥಿ ಆಯ್ಕೆ ಗೊಂದಲವನ್ನು ಪರಿಹರಿಸಲು ಮನವಿ ಮಾಡಲಿದ್ದಾರೆ.

RELATED ARTICLES

Latest News