ನವದೆಹಲಿ, ಜ.16- ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾಮಗಾರಿಗೆ ಮತ್ತಷ್ಟು ವೇಗ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮೋದಿ ಅವರು ಇತ್ತೀಚೆಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಎರಡು ಮೆಗಾ ಯೋಜನೆಗಳನ್ನು ಪರಿಶೀಲಿಸಿದರು. ಇವು ಹಲವು ವರ್ಷಗಳಿಂದ ವಿಳಂಬವಾಗುತ್ತಿದ್ದು, ವೆಚ್ಚದಲ್ಲಿ ಭಾರಿ ಏರಿಕೆಯಾಗಿದೆ. ಈ ಯೋಜನೆಗಳಲ್ಲಿ ತ್ವರಿತ ಪ್ರಗತಿ ಸಾಧಿಸುವಂತೆ ಮೋದಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಡಿ.31 ರಂದು ನಡೆದ ಸಭೆಯಲ್ಲಿ ಪ್ರಧಾನ ಮಂತ್ರಿ ಅವರು ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತು ತೆಲಂಗಾಣದ ಜೆ ಚೊಕ್ಕಾ ರಾವ್ ದೇವದುಲ ಲಿಫ್ಟ್ ನೀರಾವರಿ ಯೋಜನೆಯನ್ನು ಪರಿಶೀಲನೆ ನಡೆಸಿದರು ಎಂದು ತಿಳಿದುಬಂದಿದೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಯು ನಾಲ್ಕು ದಶಕಗಳಿಂದ ಚರ್ಚೆಯಲ್ಲಿದೆ. ಅಂತಿಮವಾಗಿ ಇದನ್ನು 2020 ರಲ್ಲಿ ಮಂಜೂರು ಮಾಡಲಾಯಿತು. 2023 ರಲ್ಲಿ ಪೂರ್ಣಗೊಳ್ಳುವ ಗುರಿಯನ್ನು ಹೊಂದಲಾಗಿತ್ತು. ಆದರೆ, ಇನ್ನೂ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ.
ಈ ಯೋಜನೆಯು ನಗರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. ಈ ಯೋಜನೆಯು ನಗರ, ಉಪನಗರಗಳು ಮತ್ತು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಾಲ್ಕು ಕಾರಿಡಾರ್ಗಳಲ್ಲಿ ಸುಮಾರು 148 ಕಿ.ಮೀ.ಗಳನ್ನು ವ್ಯಾಪಿಸಿದೆ.
ಮಹಾನಗರ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಉಪನಗರ ರೈಲು ಯೋಜನೆ ತ್ವರಿತಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
