ತುಮಕೂರು, ಅ. 22- ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಮಕೂರಿನ ಅಮಾನಿಕೆರೆಯು ತುಂಬಿ ಹರಿಯುತ್ತಿದ್ದು, ನೀರು ಹರಿದು ಹೋಗಲು ಸಮರ್ಪಕ ಕಾಲುವೆ ವ್ಯವಸ್ಥೆ ಇಲ್ಲದೆ ಹೊಲ ,ಗದ್ದೆ ,ಮನೆಗಳಿಗೆ ನೀರು ನುಗ್ಗಿದ್ದು, ಚರಂಡಿಗಳು ಸಹ ಬ್ಲಾಕ್ ಆಗಿ ನಿಂತಲ್ಲೇ ನೀರು ತುಂಬಿ ಕೊಳೆಯುತ್ತಿದೆ.
ಸಿರಾ ಗೇಟ್ನ 80 ಅಡಿ ರಸ್ತೆಯಿಂದ ಹರಿದು ಬರುವ ಒಳ ಚರಂಡಿ ನೀರು ನಂಜಪ್ಪ ಲೇಔಟ್ ಮೂರನೇ ಅಡ್ಡರಸ್ತೆಯಲ್ಲಿಯೇ ನಿಂತಿದ್ದು ಮನೆಯಿಂದ ಹೊರಗೆ ಬರಲಾಗುತ್ತಿಲ್ಲ. ಸಾರ್ವಜನಿಕರು ಕೆಲಸಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಮಕ್ಕಳು ಶಾಲೆಗಳಿಗೆ ಹೋಗಲು ಆಗುತ್ತಿಲ್ಲ. ಚರಂಡಿ ನೀರಿನಿಂದಾಗಿ ಮಕ್ಕಳು ಮತ್ತು ನಾಗರಿಕರು ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಪಾಲಿಕೆ ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ. ಇಲ್ಲಿಯವರೆವಿಗೂ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ. ಅಮಾನಿ ಕೆರೆ ಕೋಡಿ ನೀರು ಹರಿದು ಹೋಗಲು ಈವರೆಗೂ ಕಾಲುವೆ ನಿರ್ಮಾಣ ಮಾಡಿಲ್ಲ. ಕೇವಲ 400ಮೀಟರ್ ವರೆಗೆ ಮಾತ್ರ ಕಾಲುವೆ ಇದ್ದು ಅಲ್ಲಿಂದ ಮುಂದಕ್ಕೆ ಕಾಲುವೆ ಇಲ್ಲದಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾರಾದರೂ ಪರಿಹಾರ ನೀಡುವ ಭರವಸೆಯಲ್ಲಿ ಎದುರು ನೋಡುವಂತಾಗಿದೆ