ಬೆಂಗಳೂರು,ಅ.26- ಪತಿಯನ್ನು ಕೊಲೆ ಮಾಡಿಸಿ ನಾಟಕವಾಡಿದ್ದ ಪತ್ನಿ ಸೇರಿ ಐದು ಮಂದಿಯನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತೆ ನಾಗರತ್ನ, ಪ್ರಿಯಕರ ರಾಮ್ ಹಾಗೂ ಶಶಿಕುಮಾರ್, ಸುರೇಶ್ ಹಾಗೂ ಚಿನ್ನ ಬಂಧಿತರು.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಕರೂರು ನಿವಾಸಿಗಳಾದ ತಿಪ್ಪೇಶ್-ನಾಗರತ್ನ ದಂಪತಿ ಬೆಳ್ಳಂದೂರಿನ ಬೋಗನಹಳ್ಳಿಯ ಲೇಬರ್ ಶೆಡ್‌ನಲ್ಲಿ ವಾಸವಾಗಿದ್ದುಕೊಂಡಿದ್ದು, ತಿಪ್ಪೇಶ್ ಗಾರ್ಡನ್ ಕೆಲಸ ಮಾಡುತ್ತಿದ್ದರು. ಈ ನಡುವೆ ನಾಗರತ್ನ ತನ್ನ ಸಹೋದರಿ ಪತಿ ರಾಮ್ ಜೊತೆ ಅನೈತಿಕ ಸಂಬಂಧ ಹೊಂದಿದ್ದನ್ನು ತಿಳಿದ ತಿಪ್ಪೇಶ್ ಪತ್ನಿಯೊಂದಿಗೆ ಜಗಳವಾಡಿ ಬುದ್ದಿವಾದ ಹೇಳಿದ್ದಾರೆ.
ಇದರಿಂದ ಕೋಪಗೊಂಡ ನಾಗರತ್ನ ತನ್ನ ಪತಿಯನ್ನು ಮುಗಿಸಲು ಪ್ರಿಯಕರ ರಾಮ್‌ಗೆ ಸುಫಾರಿ ಕೊಟ್ಟಿದ್ದಾಳೆ. ಅದರಂತೆ ಅ.14 ರಂದು ರಾಮ್ ತನ್ನ ಸಹಚರರೊಂದಿಗೆ ಸೇರಿಕೊಂಡು ತಿಪ್ಪೇಶ್‌ನನ್ನು ಬೋಗನಹಳ್ಳಿ ಕೆರೆ ಬಳಿಯ ನೀಲಗಿರಿ ತೋಪಿನ ಬಳಿ ಕರೆದೊಯ್ದು ಕೆಳಗೆ ತಳ್ಳಿ ಬಿದ್ದಾಗ ಕುತ್ತಿಗೆಯ ಮೇಲೆ ನೀಲಗಿರಿ ಕೋಲು ಇಟ್ಟು ಹಿಸುಕಿ, ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿ ತಮ್ಮ ಪಾಡಿಗೆ ಏನೂ ಆಗಿಲ್ಲದಂತೆ ಸುಮ್ಮನಾಗಿದ್ದಾರೆ.
ನೀಲಗಿರಿ ತೋಪಿನಲ್ಲಿ ತಿಪ್ಪೇಶ್ ಕೊಲೆಯಾಗಿದ್ದಾನೆಂದು ನೆರೆಹೊರೆಯವರು ನಾಗರತ್ನಗೆ ತಿಳಿಸಿದ್ದಾರೆ. ನನ್ನ ಪತಿ ನಿನ್ನೆ ಹೊರಗೆ ಹೋಗಿದ್ದು, ಮನೆಗೆ ಹಿಂದಿರುಗಲಿಲ್ಲ ಎಂದು ಗೋಳಾಡುತ್ತಾ ಶವದ ಮುಂದೆ ಕಣ್ಣೀರಿಟ್ಟು ನಾಟಕವಾಡಿದ್ದಾಳೆ. ನಂತರ ಪತಿಯನ್ನು ಯಾರೋ ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ನಾಗರತ್ನ ಪೊಲೀಸರಿಗೆ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಕೊಲೆ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ನಂತರ ನಾಗರತ್ನಳನ್ನು ತಮ್ಮ ಶೈಲಿಯಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿದಾಗ ತಾನೇ ಕೊಲೆ ಮಾಡಿಸಿದ್ದಾಗಿ ತಿಳಿಸಿದ್ದಾಳೆ. ಪೊಲೀಸರು ಪ್ರಕರಣ ಸಂಬಂಧ ನಾಗರತ್ನ ಸೇರಿ 5 ಮಂದಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.