ಬೆಂಗಳೂರು,ನ.1- ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ. ಈ ರೀತಿ ಹೀಯಾಳಿಸುವವರ ವಿರುದ್ಧ ರಾಜ್ಯ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕನ್ನಡೇತರರ ಜೊತೆ ಅವರದೇ ಭಾಷೆಯಲ್ಲಿ ಮಾತನಾಡುವ ಬದಲು ಕನ್ನಡ ಕಲಿಸಿ ಕನ್ನಡ ವಾತಾವರಣ ನಿರ್ಮಿಸಿದರೆ ಭಾಷಾ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಸ್ವಾತಂತ್ರ್ಯಾ ನಂತರ ಭಾಷಾವಾರು ಪ್ರಾಂತ್ಯಗಳು ವಿಂಗಡಣೆಯಾದ ಬಳಿಕ ಕರ್ನಾಟಕ ಎಂದು ನಾಮಕರಣಗೊಂಡಿದೆ. ಅದರ 50ನೇ ವರ್ಷದ ವೇಳೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ ಅವರು ಅದನ್ನು ಆಚರಣೆ ಮಾಡಲಿಲ್ಲ ಎಂದು ಆಕ್ಷೇಪಿಸಿದ ಅವರು, ತಾವು ಮುಖ್ಯಮಂತ್ರಿಯಾದ ಬಳಿಕ ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ ಎಂಬ ಕಾರ್ಯಕ್ರಮವನ್ನು ಬಜೆಟ್‌ನಲ್ಲಿ ರೂಪಿಸಿದ್ದಾಗಿ ಹೇಳಿದರು.
ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಪ್ರಾಚೀನತೆ ಹೊಂದಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡಿದೆ ಎಂದರು.
ಕನ್ನಡಿಗರು ಉದಾರಿಗಳು. ಆದರೆ ನಮ ಭಾಷೆಯನ್ನು ಬಲಿ ಕೊಡುವಷ್ಟು ಉದಾರತೆ ಬೇಡ. ಭಾಷೆಯ ದುರಭಿಮಾನವೂ ಬೇಡ. ಆದರೆ ಅಭಿಮಾನ ಬೇಕೇಬೇಕು. ಭಾಷೆಯನ್ನು ಎತ್ತರಕ್ಕೆ ಕೊಂಡೊಯ್ಯಬೇಕಾದರೆ ಮೊದಲು ನಾವು ಕನ್ನಡಿಗರಾಗಬೇಕು ಎಂದು ಹೇಳಿದರು. ಬೇರೆ ಭಾಷೆಯನ್ನು ಕಲಿತು ಭಾಷಾ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಆದರೆ ಕನ್ನಡ ಮರೆಯಬಾರದು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಹೆಚ್ಚು ಶಕ್ತಿಯುತವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಮಹಾತಗಾಂಧಿ ಹೇಳಿದ್ದರು ಎಂದು ಸರಿಸಿದರು.
ರಾಜ್ಯಕ್ಕೆ ದೊಡ್ಡ ಅನ್ಯಾಯವಾಗುತ್ತಿದೆ. ದೇಶದಲ್ಲೇ ಕರ್ನಾಟಕ 4 ಲಕ್ಷ ಕೋಟಿ ರೂ. ತೆರಿಗೆಯನ್ನು ಕೇಂದ್ರಕ್ಕೆ ಪಾವತಿಸುತ್ತಿದೆ. ಮಹಾರಾಷ್ಟ್ರ ಬಿಟ್ಟರೆ ನಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಪ್ರತಿಯಾಗಿ ನಮಗೆ ವಾಪಸ್ ಬರುತ್ತಿರುವುದು ಶೇ.50ರಷ್ಟು ಮಾತ್ರ. ನಮ ತೆರಿಗೆ ಪಾಲು ಶೇ.15ರಷ್ಟಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ ಎಂಬ ಕಾರಣಕ್ಕೆ ಮುಂದುವರೆದ ರಾಜ್ಯ ಎಂದು ಅನ್ಯಾಯ ಮಾಡಬಾರದು ಎಂದರು.
ಹಸು ಹಾಲು ಕೊಡುತ್ತದೆ ಎಂದು ಎಲ್ಲವನ್ನೂ ಕರೆದುಕೊಳ್ಳಬಾರದು, ಸ್ವಲ್ಪ ಉಳಿಸದೇ ಇದ್ದರೆ, ಕರು ದುರ್ಬಲವಾಗುತ್ತದೆ. ನ್ಯಾಯಯುತವಾಗಿ ನಾವು ನಮ ಪಾಲನ್ನು ಕೇಳಿದಾಗ ಅದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಸರಿಯಲ್ಲ. ನಮ ಹಕ್ಕುಗಳನ್ನು ರಕ್ಷಣೆ ಮಾಡಿಕೊಳ್ಳಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಪ್ರತಿಭಟನೆಯ ಧ್ವನಿಯನ್ನು ಎತ್ತಿದರೆ ಮಾತ್ರ ನ್ಯಾಯ ಪಡೆಯಲು ಸಾಧ್ಯ ಎಂದು ಹೇಳಿದರು.
15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರದ ತಾರತಮ್ಯದ ಹೊರತಾಗಿಯೂ ಶಾಲಾ-ಕಾಲೇಜು ಸುಧಾರಣೆ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವಾರದ ಆರು ದಿನ ಮೊಟ್ಟೆಯ ಜೊತೆಗೆ ಹಾಲು ನೀಡಲಾಗುತ್ತಿದೆ. ಸಾಯಿ ಅನ್ನಪೂರ್ಣ ಸಂಸ್ಥೆ ರಾಗಿಮಾಲ್‌್ಟ ನೀಡಲು ಮುಂದಾಗಿದೆ. ಈ ಮೂಲಕ ಮಕ್ಕಳ ಪೌಷ್ಟಿಕಾಂಶವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕರ್ನಾಟಕ ಹೆಸರಾಗಿ, ಉಸಿರಾಗಿ 50 ವರ್ಷ ಪೂರ್ಣಗೊಂಡಿದೆ. ಕಾವೇರಿ, ತುಂಗಭದ್ರೆ ನಮ ಪುಣ್ಯತೀರ್ಥಗಳು. ಕನ್ನಡಮನ ಬಹುದೊಡ್ಡ ಹಬ್ಬವನ್ನು ಇಂದು ಆಚರಿಸುತ್ತಿದ್ದೇವೆ. ಕನ್ನಡವನ್ನು ಬದುಕಿನ ಭಾಷೆಯನ್ನಾಗಿ ಪರಿವರ್ತಿಸುವುದು ನಮ ಸರ್ಕಾರದ ಗುರಿ ಎಂದು ತಿಳಿಸಿದರು.
ತಾಯ್ನಾಡು ಮತ್ತು ನೆಲಕ್ಕೆ ಕೃತಜ್ಞತೆ ಸಲ್ಲಿಸುವುದು ಎಲ್ಲರ ಕರ್ತವ್ಯ. ಬೆಂಗಳೂರು ನಗರ ಜಿಲ್ಲೆಯಲ್ಲಿ ಎಲ್ಲಾ ಶಾಲಾ-ಕಾಲೇಜು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ವರ್ಷದಿಂದ ಕನ್ನಡ ಧ್ವಜವನ್ನು ಕಡ್ಡಾಯವಾಗಿ ಹಾರಿಸಬೇಕೆಂದು ಮನವಿ ಮಾಡಲಾಗಿದೆ. ಸಂಜೆ ವೇಳೆಗೆ ಈ ಕುರಿತು ವರದಿ ಪಡೆದುಕೊಳ್ಳಲಾಗುವುದು. ದೇಶದಲ್ಲಿ ಯಾವ ರಾಜ್ಯಕ್ಕೂ ಪ್ರತ್ಯೇಕ ಧ್ವಜ ಹಾಗೂ ನಾಡಗೀತೆಯಿಲ್ಲ. ಆದರೆ ನಮ ಹಿರಿಯರು ಅವರೆಡನ್ನೂ ನಮಗೆ ಕೊಡುಗೆ ನೀಡಿದ್ದಾರೆ ಎಂದರು.
ಬೇರೆಬೇರೆ ರಾಜ್ಯಗಳಿಂದಲೂ ಬದುಕನ್ನರಸಿ ಜನ ಇಲ್ಲಿಗೆ ಬರುತ್ತಿದ್ದಾರೆ. ಕನ್ನಡಿಗರು ದೇಶ-ವಿದೇಶಗಳಿಗೆ ಹೋಗಿ ರಾಜ್ಯದ ಕೀರ್ತಿಯನ್ನು ಎತ್ತಿ ಹಿಡಿಯುತ್ತಿದ್ದಾರೆ. ಕನ್ನಡದ ಅಭಿವೃದ್ಧಿ ಮಿಂಚಿನ ಓಟದಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಕನ್ನಡ ದೀವಿಗೆ ಪುಸ್ತಕವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ, ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಎನ್.ಎ.ಹ್ಯಾರಿಸ್, ರಿಜ್ವಾನ್ ಹರ್ಷದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.