Thursday, December 12, 2024
Homeರಾಜ್ಯರಾಜ್ಯದಲ್ಲಿ ಅಕ್ಟೋಬರ್‌ನಲ್ಲಿ ವಾಡಿಕೆಗಿಂತ ಶೇ.41ರಷ್ಟು ಹೆಚ್ಚು ಮಳೆ

ರಾಜ್ಯದಲ್ಲಿ ಅಕ್ಟೋಬರ್‌ನಲ್ಲಿ ವಾಡಿಕೆಗಿಂತ ಶೇ.41ರಷ್ಟು ಹೆಚ್ಚು ಮಳೆ

ಬೆಂಗಳೂರು, ನ.1-ರಾಜ್ಯದಲ್ಲಿ ನಿರಂತರ ಮಳೆಯಾದ ಪರಿಣಾಮ ಅಕ್ಟೋಬರ್‌ ತಿಂಗಳಿನಲ್ಲಿ ವಾಡಿಕೆಗಿಂತ ಶೇ.41ರಷ್ಟು ಹೆಚ್ಚು ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಅಕ್ಟೋಬರ್‌ ಒಂದರಿಂದ 31ರ ನಡುವಿನ ಒಂದು ತಿಂಗಳ ಅವಧಿಯಲ್ಲಿ 131 ಮಿ.ಮೀ..ವಾಡಿಕೆ ಮಳೆ ಪ್ರಮಾಣವಿದೆ. ಈ ಅವಧಿಯಲ್ಲಿ 184.8 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.41ರಷ್ಟು ಹೆಚ್ಚಾಗಿದೆ.

ದಕ್ಷಿಣ ಒಳನಾಡಿನಲ್ಲಿ 157.7ಮಿ.ಮೀ. ವಾಡಿಕೆ ಮಳೆ ಪ್ರಮಾಣವಿದ್ದು, 220.3 ಮಿ.ಮೀ.ಮಳೆಯಾಗಿದ್ದು, ವಾಡಿಕೆಗಿಂತ ಶೇ.60ರಷ್ಟು ಅಧಿಕ ಪ್ರಮಾಣದ ಮಳೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕಡಿಮೆಯಾಗಿದ್ದರೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. 107 7ಮಿ.ಮೀ. ವಾಡಿಕೆ ಮಳೆಗೆ 129.6 ಮಿ.ಮೀ.ನಷ್ಟು ಮಳೆಯಾಗಿದ್ದು, ಶೇ. 21 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಅದೇ ರೀತಿ ಮಲೆನಾಡಿನಲ್ಲಿ 159.3 7ಮಿ.ಮೀ. ವಾಡಿಕೆ ಮಳೆಗೆ 240.6 7ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.51ರಷ್ಟು ಮಳೆಯಾಗಿದೆ. ಕರಾವಳಿ ಭಾಗದಲ್ಲಿ 187.87ಮಿ.ಮೀ. ವಾಡಿಕೆ ಮಳೆಗೆ 261.3 ಮಳೆಯಾಗಿದೆ. ವಾಡಿಕೆಗಿಂತ ಶೇ.39ರಷ್ಟು ಹೆಚ್ಚು ಮಳೆಯಾದಂತಾಗಿದೆ.

ಮುಂಗಾರು ಮಳೆಯ ಅವಧಿಯಾದ ಜೂನ್‌ ಒಂದರಿಂದ ಸೆಪ್ಟೆಂಬರ್‌ 30ರ ನಡುವಿನ ಅವಧಿಯಲ್ಲೂ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ಎಲ್ಲಾ ಪ್ರಮುಖ ಜಲಾಶಯಗಳು ಭರ್ತಿಯಾಗಲು ಸಾಧ್ಯವಾಗಿದೆ. ಈ ಅವಧಿಯಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 852 ಮಿ.ಮೀ. ಆಗಿದ್ದು, 978 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.15ರಷ್ಟು ಹೆಚ್ಚು ಮಳೆಯಾಗಿತ್ತು.ದಕ್ಷಿಣ ಒಳನಾಡಿನಲ್ಲಿ ಶೇ.11, ಉತ್ತರ ಒಳನಾಡಿನಲ್ಲಿ ಶೇ.12, ಮಲೆನಾಡು ಭಾಗದಲ್ಲಿ ಶೇ.13 ಹಾಗೂ ಕರಾವಳಿ ಭಾಗದಲ್ಲಿ ಶೇ.20ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು.

ಹಾಗೆಯೇ ಜೂನ್‌ ಒಂದರಿಂದ ಅಕ್ಟೋಬರ್‌ ಅಂತ್ಯದ ನಡುವಿನ ಅವಧಿಯಲ್ಲೂ ವಾಡಿಕೆಗಿಂತ ಶೇ.20ರಷ್ಟು ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ 1102 7ಮಿ.ಮೀ. ವಾಡಿಕೆ ಮಳೆಗೆ 1322 ಮಿ.ಮೀ.ನಷ್ಟು ಮಳೆಯಾಗಿದೆ. ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಅವಧಿಯಲ್ಲಿ ವಾಡಿಕೆ ಪ್ರಮಾಣದ ಇಲ್ಲವೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಅಕ್ಟೋಬರ್‌ ಮಧ್ಯಭಾಗದಿಂದ ಹಿಂಗಾರು ಮಳೆಯೂ ಚುರುಕಾಗಿದ್ದು, ರಾಜ್ಯದಲ್ಲಿ ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಮುಂದುವರೆದಿದೆ. ಇದರಿಂದ ಹಿಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲವಾಗಿದೆ. ಆದರೆ, ಕೊಯ್ಲಿಗೆ ಬಂದಿರುವ ಮುಂಗಾರು ಹಂಗಾಮಿನ ಬೆಳೆಗಳಿಗೆ ತೊಂದರೆ ಉಂಟಾಗುತ್ತಿದೆ.

RELATED ARTICLES

Latest News