ದೊಡ್ಡಬಳ್ಳಾಪುರ,ನ.11– ಹಾಡುಹಗಲೇ ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಸ್ಕೂಟರ್ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.
ಹುಲಿಕುಂಟೆ ಗ್ರಾಮದ ಶಿವಕುಮಾರ್ ಬಂಧಿತ ಆರೋಪಿ. ಇತ್ತೀಚೆಗೆ ಕುರುಬರಹಳ್ಳಿಯಲ್ಲಿ ಮನೆ ಮಾಲೀಕರು ಒಳಗೆ ಇರುವಾಗಲೇ ಹಾಡ ಹಗಲಿನಲ್ಲೇ ಮುಸುಕುಧಾರಿಯಾಗಿ ಬಂದು ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿಕೊಂಡು ಪರಾರಿಯಾಗಿದ್ದ.
ಕೆಲ ತಿಂಗಳ ಹಿಂದೆ ಸ್ಕೂಟರ್ ಮಾಲೀಕರ ಮನೆಯಲ್ಲಿಯೇ ಬಾಡಿಗೆಗೆ ಇದ್ದ ಈತ, ಸುಮಾರು ಮೂರು ತಿಂಗಳ ಹಿಂದೆ ಮನೆ ಮಾಲೀಕರು ಸ್ಕೂಟರ್ ಕೀ ಯನ್ನ ಮರೆತು ಗಾಡಿಯಲ್ಲೆ ಬಿಟ್ಟಿದ್ದರು , ಆ ಕೀಯನ್ನ ಶಿವಕುಮಾರ್ ತೆಗೆದು ಕೊಂಡಿದ್ದು ನಂತರ ಕೆಲ ತಿಂಗಳ ಹಿಂದೆ ಮನೆ ಖಾಲಿ ಮಾಡಿದ್ದನಂತೆ.
ಅದೇ ಕೀ ಯನ್ನ ಬಳಸಿ ಆರೋಪಿ ಶಿವಕುಮಾರ, ಮೊನ್ನೆ ಈ ಕೃತ್ಯ ಎಸಗಿದ್ದಾನೆ. ಈ ಕುರಿತು ದೂರು ದಾಖಲಾದ ನಂತರ ತನಿಖೆ ನಡೆಸಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿ ಶಿವಕುಮಾರ್ ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವಂತೆ ಕಾಣುತಿದ್ದಾನೆ. ಈತ ಕಳ್ಳತನ ನಡೆಸಬೇಕೆಂಬ ಉದ್ದೇಶದಿಂದ ನಡೆಸಿಲ್ಲ ಎಂದು ಹೇಳಲಾಗುತ್ತಿದೆ.