ಬೆಂಗಳೂರು,ನ.20– ಆದಾಯದ ಮಿತಿ ನೆಪವೊಡ್ಡಿ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಪಡಿಸುವ ಸರ್ಕಾರದ ತೀರ್ಮಾನಕ್ಕೆ ರಾಜ್ಯದೆಲ್ಲೆಡೆ ಸಾರ್ವಜನಿಕರಿಂದ ಭಾರೀ ಆಕೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ರಾಜ್ಯದ ಕಟ್ಟಡ ಕಾರ್ಮಿಕರ ಕಾರ್ಡ್ಗಳನ್ನು ರದ್ದು ಮಾಡಲು ಸರ್ಕಾರ ಸಿದ್ದತೆ ನಡೆಸಿದೆ.
ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಇಲಾಖೆ 2.46 ಲಕ್ಷ ಕಾರ್ಡ್ ರದ್ದು ಮಾಡಲು ಸದ್ದಿಲ್ಲದೆ, ಸಿದ್ದತೆ ನಡೆಸಿದೆ. ಕಾರ್ಮಿಕ ಇಲಾಖೆಯು ಈಗಾಗಲೇ 2,46,951 ಕಾರ್ಡಗಳನ್ನು ನಕಲಿ ಎಂದು ಪಟ್ಟಿ ಮಾಡಿದ್ದು ಸದ್ಯದಲ್ಲೇ ಕತ್ತರಿ ಪ್ರಯೋಗ ನಡೆಯಲಿದೆ ಎಂದು ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್ ಸಂಯೋಜಿಸಿ, ಆಧಾರ್ಕಾರ್ಡ್ ಆಧಾರಿತ ನೋಂದಣಿ ಮಾಡುವ ಮೂಲಕ ಅರ್ಹರಿಗೆ ಮಾತ್ರ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.
ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಬರೋಬ್ಬರಿ 38 ಲಕ್ಷದ 42 ಸಾವಿರ ಕಾರ್ಮಿಕರ ಹೆಸರು ನೋಂದಣಿಯಾಗಿದೆ. 38.42 ಲಕ್ಷದ ಪೈಕಿ 2.46 ಸಾವಿರ ಕಾರ್ಡ್ ಅಮಾನತು ಮಾಡಲಾಗುತ್ತಿದೆ. ಹಾವೇರಿಯಲ್ಲಿ ಅತೀ ಹೆಚ್ಚು 1,69,180 ಕಾರ್ಡ್ ಗಳು ರದ್ದಾಗಲಿವೆ.
ಮದುವೆ, ಮರಣ, ಹೆರಿಗೆ, ಅಪಘಾತ ಸಂದರ್ಭದಲ್ಲಿ ದೊಡ್ಡ ಮೊತ್ತದ ಆರ್ಥಿಕ ನೆರವು ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ನಕಲಿ ಜಾಬ್ ಕಾರ್ಡ್ಗಳ ಸೃಷ್ಟಿಯಾಗಿವೆ. ಆನ್ ಲೈನ್ನಲ್ಲೇ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯುವ ಅವಕಾಶ ಇದ್ದು, ಲಕ್ಷಾಂತರ ಜನ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಕಾರ್ಮಿಕ ಇಲಾಖೆಗೆ ದಾಖಲೆ ಪರಿಶೀಲನೆ ಕಷ್ಟವಾಗ್ತಿದೆ. ಇದು ನಕಲಿ ಕಾರ್ಡ್ ಪಡೆಯುವವರಿಗೆ ಅನುಕೂಲವಾಗಿದೆ.
ಮೊಬೈಲ್ ಆಪ್ ಮೂಲಕ ಇ-ಹಾಜರಾತಿ ಸವಲತ್ತು ಕಲ್ಪಿಸಲು ಪ್ಲ್ಯಾನ್, ಮಾಡಲಾಗಿದೆ. ಕಟ್ಟಡ ಇತರೆ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಕ್ಕೆ ಮೊಬೈಲ್ ವ್ಯಾನ್ ತೆರಳಿ, ಖುದ್ದು ಕಾರ್ಮಿಕರ ನೋಂದಣಿ ಮಾಡಲು ಯೋಜನೆ ರೂಪಿಸಲಾಗಿದೆ. ಸ್ಥಳದಲ್ಲೇ ಇ-ಕಾರ್ಡ್ ಕೊಡುವ ವ್ಯವಸ್ಥೆಯನ್ನೂ ಜಾರಿಗೆ ತರಲು ತಯಾರಿ ನಡೆಸಲಾಗುತ್ತಿದೆ.
ಕಾರ್ಮಿಕ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಕೇಂದ್ರ ಸ್ಥಾಪಿಸಿ, ನೈಜ ಕಟ್ಟಡ ಕಾರ್ಮಿಕರಿಗೆ ಸವಲತ್ತು ದೊರಕಿಸಿಕೊಡುವುದರ ಜೊತೆಗೆ ನಕಲಿ ಕಾರ್ಡ್ ಪತ್ತೆಗೂ ಸರ್ಕಾರ ಇದೀಗ ಹೆಜ್ಜೆ ಇಟ್ಟಿದೆ. ವಲಸಿಗರಾಗಿರುವುದರಿಂದ ಕೆಲಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳುತ್ತಾರೆ. ಹೋದಲ್ಲೆಲ್ಲ ನೋಂದಣಿ ಮಾಡುವ ಬದಲು ಪೋರ್ಟ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿ ಪಡೆದ ಕಾರ್ಡ್ ಎಲ್ಲೇ ಕೆಲಸ ಮಾಡಿದರೂ, ಅದರಲ್ಲಿ ಮಾಹಿತಿ ಅಡಕವಾಗುವ ಏರ್ಪಾಡು ಮಾಡಲಾಗುತ್ತದೆ.
ಏನು ಲಾಭ? :
ಕಾರ್ಡ್ ಹೊಂದಿದವರಿಗೆ ಹಲವು ಸೌಲಭ್ಯ ಸಿಗುತ್ತಿವೆ. ವಯೋ ನಿವೃತ್ತಿ ಪಿಂಚಣಿ, ಅಂಗವಿಕಲ ಪಿಂಚಣಿ, ಟೂಲ್ ಕಿಟ್, ವಸತಿ ಸೌಲಭ್ಯ, ಹೆರಿಗೆ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ ಸೌಲಭ್ಯ, ಅಪಘಾತ ಪರಿಹಾರ, ಮದುವೆ ಸಹಾಯಧನ, ಅಂತ್ಯಕ್ರಿಯೆ ವೆಚ್ಚ ಹೀಗೆ 15ಕ್ಕೂ ಹೆಚ್ಚು ಸೌಲಭ್ಯಗಳಿಗೆ ಆರ್ಥಿಕ ನೆರವನ್ನು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೀಡುತ್ತಿದೆ.
ರಾಜ್ಯ ಕಾರ್ಮಿಕರ ಕಾರ್ಡ್ಗಳ ಜಿಲ್ಲಾವಾರು ಪಟ್ಟಿ :
ಮೈಸೂರು- 1316
ಚಾಮರಾಜನಗರ- 743
ಬಾಗಲಕೋಟೆ- 2039
ಬೆಂ.ಗ್ರಾಮಾಂತರ-402
ಬೆಂ.ನಗರ- 2967
ಬೆಳಗಾವಿ- 1136
ಬಳ್ಳಾರಿ- 1498
ಬೀದರ್- 25,759
ವಿಜಯಪುರ- 2097
ಚಿಕ್ಕಬಳ್ಳಾಪುರ- 1242
ಚಿಕ್ಕಮಗಳೂರು- 1173
ಚಿತ್ರದುರ್ಗ- 859
ದಕ್ಷಿಣ ಕನ್ನಡ- 1076
ದಾವಣಗೆರೆ- 3659
ಧಾರವಾಡ- 3503
ಗದಗ- 3051
ಕಲಬುರಗಿ- 2280
ಹಾಸನ-2266
ಹಾವೇರಿ- 1,69,180
ಕೊಡಗು- 175
ಕೋಲಾರ- 1988
ಕೊಪ್ಪಳ- 2083
ಮಂಡ್ಯ- 396
ರಾಯಚೂರು- 383
ರಾಮನಗರ- 2748
ಶಿವಮೊಗ್ಗ- 6900
ತುಮಕೂರು- 1210
ಉಡುಪಿ- 210
ಉತ್ತರ ಕನ್ನಡ-4155
ಯಾದಗಿರಿ- 457