ಬೆಂಗಳೂರು,ನ.20- ಅರ್ಹರಿಂದ ಅರ್ಜಿ ಪಡೆದು ಮತ್ತೆ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಲಾಗುವುದು. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿಯಮಾವಳಿಗಳ ಅನುಸಾರ ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ನಡೆಯುತ್ತಿದೆ. ಕಾರ್ಡ್ಗಳು ರದ್ದಾದ ಅರ್ಹರು ಆತಂಕಕ್ಕೆ ಒಳಗಾಗುವುದು ಬೇಡ. ಅರ್ಹರಿಂದ ಮತ್ತೆ ಅರ್ಜಿ ಪಡೆದು ಬಿಪಿಎಲ್ ಕಾರ್ಡ್ ಮಾಡಿಕೊಡಲಾಗುವುದು ಎಂದರು.
ಕೇಂದ್ರ ಸರ್ಕಾರ ರೂಪಿಸುವ ನಿಯಮಾವಳಿಗಳ ಪ್ರಕಾರ, ವಾಹನ ಹೊಂದಿರುವವರು, 7.50 ಎಕರೆ ಜಮೀನು ಹೊಂದಿರುವವರು ಬಿಪಿಎಲ್ ವ್ಯಾಪ್ತಿಗೊಳಪಡುವುದಿಲ್ಲ. ಕೆಲವು ಆದಾಯ ತೆರಿಗೆ ಪಾವತಿದಾರರು, ಸಹಕಾರ ಸಂಘಗಳ ಖಾಯಂ ಅಧಿಕಾರಿಗಳು, ಸರ್ಕಾರಿ ನೌಕರರು ಬಿಪಿಎಲ್ ಪಡೆದಿದ್ದಾರೆ. ಕೆಲವರು ಪ್ರಮಾಣ ಪತ್ರ ಸಲ್ಲಿಸುವಾಗ ಈ ಮಾಹಿತಿಗಳು ಸಿಕ್ಕಿಬಿದ್ದಿವೆ. ಒಂದು ಊರಿನಲ್ಲಿ 10-20 ಅರ್ಹರ ಕಾರ್ಡ್ಗಳು ರದ್ದುಗೊಂಡಿವೆ. ಇದನ್ನೆಲ್ಲಾ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಈ ಹಿಂದೆ ಅರ್ಜಿ ಸಲ್ಲಿಸಿದಾಗ ಪರಿಶೀಲನೆ ನಡೆಸಿ ಕಾರ್ಡ್ ನೀಡಲಾಗಿತ್ತು. ಮನೆಮನೆ ಸಮೀಕ್ಷೆಗಳು ನಡೆದಿಲ್ಲ. ನಮ ಸರ್ಕಾರ ಇರುವುದೇ ಬಡವರಿಗಾಗಿ. ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ದಾಖಲೆಗಳು ಆಧರಿಸಿ ಕ್ರಮ ಕೈಗೊಂಡಾಗ ಕೆಲವರಿಗೆ ತೊಂದರೆಯಾಗಿದೆ. ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದರು.
ಮುಖ್ಯಮಂತ್ರಿಯವರು ಈಗಾಗಲೇ ಸಚಿವರಿಗೆ, ಶಾಸಕರಿಗೆ ಸೂಚನೆ ನೀಡಿದ್ದೇವೆ. ಶಾಸಕರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಲ್ಲಿಕೆಯ ಪದಾಧಿಕಾರಿಗಳು ಖುದ್ದಾಗಿ ಹೋಗಿ ಅರ್ಹರಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲಿದ್ದಾರೆ ಎಂದು ಹೇಳಿದರು.
ಸಚಿವ ಸಂಪುಟ ಪುನರ್ ರಚನೆ ಕುರಿತಂತೆ ಮುಖ್ಯಮಂತ್ರಿಯವರ ಬಳಿ ಸ್ಪಷ್ಟನೆ ಕೇಳುವಂತೆ ಸಲಹೆ ನೀಡಿದರು.ನಂದಿನಿ ಹಾಲಿನ ಮಾರುಕಟ್ಟೆಯನ್ನು ವಿಸ್ತರಿಸಲು ಮುಖ್ಯಮಂತ್ರಿಯವರು ಇಂದು ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದರಿಂದ ನಮ ರೈತರಿಗೆ ಅನುಕೂಲವಾಗಲಿದೆ.
ಹಾಲಿನ ಮಾರುಕಟ್ಟೆ ಹೆಚ್ಚಾಗುವುದರಿಂದ ಹಾಲು ಒಕ್ಕೂಟಗಳಿಗೆ ಲಾಭವಾಗಲಿದೆ. ನಾನೂ ಕೂಡ ದೆಹಲಿಗೆ ಭೇಟಿ ನೀಡಬೇಕಿತ್ತು. ಆದರೆ ಮುರುಡೇಶ್ವರದಲ್ಲಿ ಮೀನು ಮಾರುಕಟ್ಟೆ ಉದ್ಘಾಟನೆಗೆ ಹೋಗಬೇಕಾಗಿರುವುದರಿಂದ ದೆಹಲಿ ಪ್ರವಾಸ ಕೈಗೊಳ್ಳುತ್ತಿಲ್ಲ ಎಂದರು.
ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆಗೆ ಸಂಬಂಧಪಟ್ಟಂತೆ ಎಡಪಂಥೀಯ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ್ರವರು ಈ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.