Thursday, December 12, 2024
HomeUncategorizedನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಕುರಿತು ಯಾವುದೇ ಅನುಮಾನ ಬೇಡ : ಪರಮೇಶ್ವರ್

ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಕುರಿತು ಯಾವುದೇ ಅನುಮಾನ ಬೇಡ : ಪರಮೇಶ್ವರ್

ಬೆಂಗಳೂರು, ನ.20- ನಕ್ಸಲ್ ನಾಯಕ ವಿಕ್ರಂ ಗೌಡನ ಬಳಿ ಆಟೋಮ್ಯಾಟಿಕ್ ಮಿಷಿನ್ ಗನ್ ಇತ್ತು. ಎನ್ಕೌಂಟರ್ ಮಾಡದೇ ಇದ್ದರೆ ಪೊಲೀಸರ ಮೇಲೆಯೇ ಗುಂಡು ಹಾರಿಸುವ ಸಾಧ್ಯತೆಯಿತ್ತು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಖಿತವಾಗಿ ವರದಿ ಬರುವವರೆಗೂ ಲಭ್ಯ ಇರುವ ಪ್ರಾಥಮಿಕ ಮಾಹಿತಿಯನ್ನಾಧರಿಸಿ ಹೇಳಿಕೆ ನೀಡುತ್ತೇನೆ. ವಿಕ್ರಂ ಗೌಡನ ವಿರುದ್ಧ ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎಂದರು.

ವಿಕ್ರಂಗೌಡನ ಬಳಿ ಆಟೋಮ್ಯಾಟಿಕ್ ಮಿಷಿನ್ ಗನ್ ಮಾದರಿಯ ಆಯುಧಗಳನ್ನು ಇಟ್ಟುಕೊಂಡು ಅಡ್ಡಾಡುತ್ತಿದ್ದ. ಪೊಲೀಸರು ಶೂಟ್ ಮಾಡದೇ ಇದ್ದರೆ ನಮವರಿಗೆಲ್ಲಾ ಗುಂಡು ಹಾರಿಸುವ ಸಾಧ್ಯತೆ ಇತ್ತು. ಅದಕ್ಕಾಗಿ ಮೊದಲ ನೋಟಕ್ಕೆ ಫೈರಿಂಗ್ ಮಾಡಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಕ್ಸಲ್ ಚಟುವಟಿಕೆ ಹೆಚ್ಚಾಗಿದೆ ಎಂದು ಬಿಜೆಪಿ ಶಾಸಕ ಸುನಿಲ್ಕುಮಾರ್ ಹೇಳಿದ್ದಾರೆ. ನಕ್ಸಲ್ ನಿಗ್ರಹ ಪಡೆ ಕಾರ್ಕಳದಲ್ಲೇ ನೆಲೆಯೂರಿದೆ. ಹೆಬ್ರಿ, ಕಾರ್ಕಳ ಎಲ್ಲವೂ ಸುನಿಲ್ಕುಮಾರ್ರವರ ವ್ಯಾಪ್ತಿಗೆ ಒಳಪಡುತ್ತದೆ. ಕಳೆದ 15 ದಿನಗಳ ಹಿಂದೆ ಲತಾ ಮತ್ತು ರಾಜು ಎಂಬ ನಕ್ಸಲ್ ನಾಯಕರು ಕಾಣಿಸಿಕೊಂಡಿದ್ದರು. ತಕ್ಷಣವೇ ಆಂತರಿಕ ಭದ್ರತೆಯವರು ಕೂಂಬಿಂಗ್ ಆರಂಭಿಸಿದರು ಎಂದರು.

ಈ ನಡುವೆ ವಿಕ್ರಂ ಗೌಡ ತಂಡ ಕಾಣಿಸಿಕೊಂಡಿದೆ. ಇವರನ್ನು ಹಾಗೆಯೇ ಬಿಟ್ಟುಕೊಂಡು, ಏನು ಮಾಡಿದರೂ ನಡೆಯುತ್ತದೆ ಎಂದು ಸುಮನಿರಲು ಸಾಧ್ಯವಿಲ್ಲ. ಹೀಗಾಗಿ ಎನ್ಕೌಂಟರ್ ಆಗಿದೆ. ಕೆಲವರು ವಿಕ್ರಂಗೌಡನ ಹತ್ಯೆಯ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕೊಲೆ ಸೇರಿ 60 ಪ್ರಕರಣಗಳಲ್ಲಿ ಭಾಗಿಯಾಗಿ ಮಾರಕ ಆಯುಧಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದವನ ಎನ್ಕೌಂಟರ್ ಪ್ರಕರಣವನ್ನು ಯಾವ ಕಾರಣಕ್ಕೆ ತನಿಖೆ ಮಾಡಬೇಕು ಎಂದು ಪ್ರಶ್ನಿಸಿದರು.

ಇಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಹಾಗೆಯೇ ಬಿಟ್ಟು ಸ್ನೇಹಮಯ ವಾತಾವರಣದಲ್ಲಿ ಮುಂದುವರೆಸಲು ಸಾಧ್ಯವಿಲ್ಲ. ಇಲ್ಲಿ ಕಾಂಗ್ರೆಸ್, ಬಿಜೆಪಿಯೆಂಬ ಪ್ರಶ್ನೆಯಿಲ್ಲ. ಯಾವ ಉದ್ದೇಶಕ್ಕಾಗಿ ಅವರು ನಕ್ಸಲಿಸಂಗೆ ಹೋಗಿದ್ದಾರೆ ಎಂಬುದು ಮುಖ್ಯ. ವಿಕ್ರಂ ಗೌಡನಿಗೆ ಶರಣಾಗಲು ಪೊಲೀಸರು ಸೂಚಿಸಿದರು. ನಕ್ಸಲ್ ನಾಯಕರೂ ಕೂಡ ಆತನಿಗೆ ಪತ್ರ ಬರೆದು ಶರಣಾಗಲು ಸಲಹೆ ನೀಡಿದ್ದರು. ಆತ ಯಾವುದನ್ನೂ ಕೇಳಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ನಿನ್ನೆ ಸಂಜೆ ಲೋಕಾಯುಕ್ತ ಪೊಲೀಸರ ಕಚೇರಿಗೆ ಹೋಗಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಬಹುತೇಕ ರಾತ್ರಿ ವೇಳೆ ಲೋಕಾಯುಕ್ತ ಕಚೇರಿಗೆ ಬೀಗ ಹಾಕಿದ್ದರು. ಬಹುಷಃ ಮಲ್ಲಿಕಾರ್ಜುನ ಸ್ವಾಮಿ ಅವರು ಅದನ್ನು ಪರಿಶೀಲಿಸಲು ಹೋಗಿರಬಹುದು ಎಂದು ಹಾಸ್ಯಚಟಾಕಿ ಹಾರಿಸಿದರು.

ಜಾತಿ ಜನಗಣತಿ ವರದಿಯ ಬಗ್ಗೆ ಸ್ವಾಮೀಜಿ ಸೇರಿದಂತೆ ಹಲವರು ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂದರ್ಭಾನುಸಾರ ವರದಿಯನ್ನು ಬಹಿರಂಗ ಮಾಡುವುದಾಗಿ ಹೇಳಿದ್ದಾರೆ. ಈ ಹಿಂದೆ ಉಪಚುನಾವಣೆ ಇದ್ದ ಕಾರಣಕ್ಕೆ ವರದಿಯನ್ನು ಪ್ರಸ್ತಾಪ ಮಾಡಿರಲಿಲ್ಲ ಎಂದು ಹೇಳಿದರು.
ಬಿಪಿಎಲ್ ಕಾರ್ಡ್ ಪರಿಶೀಲನೆಗೆ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ. ಎಲ್ಲಾದರೂ ತಪ್ಪು ಗ್ರಹಿಕೆಯಿಂದ ಕಾರ್ಡ್ಗಳು ರದ್ದುಗೊಂಡಿದ್ದರೆ ಅದನ್ನು ಮರುಸ್ಥಾಪಿಸಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ಜನರಿಗೆ ಮಾಹಿತಿ ನೀಡುವಲ್ಲಿ ಲೋಪಗಳಾಗಿರಬಹುದು. ಆದರೆ ಕಾನೂನು ಬಾಹಿರವಾಗಿ ಪಡೆದಿರುವ ಕಾರ್ಡ್ಗಳನ್ನಷ್ಟೇ ರದ್ದುಪಡಿಸಲಾಗುತ್ತಿದೆ. ಅರ್ಹರು ವಂಚಿತರಾಗಿದ್ದರೆ ನಾವು ಸರಿಪಡಿಸುತ್ತೇವೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಬೇಕು. ಹಿರಿಯ ಶಾಸಕರು ತಮಗೆ ಅವಕಾಶ ನೀಡಿ ಎಂದು ಮನವಿ ಸಲ್ಲಿಸುವುದರಲ್ಲಿ ತಪ್ಪಿಲ್ಲ. ಕೆಲವರು ಮೂರ್ನಾಲು ಬಾರಿ ಆಯ್ಕೆಯಾಗಿದ್ದಾರೆ. ಶಕ್ತಿ ಸಾಮರ್ಥ್ಯಕ್ಕನುಸಾರ ಸಚಿವ ಸ್ಥಾನ ಕೇಳುತ್ತಾರೆ ಎಂದು ಹೇಳಿದರು.

RELATED ARTICLES

Latest News