ಬೆಂಗಳೂರು, ನ.23- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಎಲ್ಲ ಕ್ಷೇತ್ರಗಳನ್ನೂ ಗೆಲ್ಲುವ ಮೂಲಕ ಬಿಜೆಪಿ-ಜೆಡಿಎಸ್ ನೇತೃತ್ವದ ಎನ್‌ಡಿಎಗೆ ತೀವ್ರ ಮುಖಭಂಗ ಉಂಟುಮಾಡಿದೆ. ರಾಷ್ಟ್ರದ ಗಮನ ಸೆಳೆದಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕೈ ಅಭ್ಯರ್ಥಿಗಳು ಗೆಲ್ಲುವ ಮೂಲಕ ಎನ್‌ಡಿಎಗೆ ತೀವ್ರ ಆಘಾತ ನೀಡಿದ್ದಾರೆ.
ಉಪಚುನಾವಣೆಯಲ್ಲಿ ಭಾರೀ ಸದ್ದುಗದ್ದಲ ಮಾಡಿದ್ದ ಮುಡಾ, ವಾಲೀಕಿ, ವಕ್‌್ಫ ಹಾಗೂ ಸಚಿವ ಜಮೀರ್ ಅವರ ವಿವಾದಾತಕ ಹೇಳಿಕೆಗಳು ಮತದಾರನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ಫಲಿತಾಂಶದಿಂದಲೇ ಸ್ಪಷ್ಟವಾಗಿದೆ.
ಈ ಫಲಿತಾಂಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿ ಮತ್ತಷ್ಟು ಗಟ್ಟಿಯಾಗಿದ್ದು, ತಮನ್ನು ಅಧಿಕಾರದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ ಎಂಬ ಸಂದೇಶವನ್ನು ಪ್ರತಿಪಕ್ಷ ಮತ್ತು ಸ್ವಪಕ್ಷದವರಿಗೂ ನೀಡಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಕಾಳಗಕ್ಕೆ ಸಾಕ್ಷಿಯಾಗಿದ್ದ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸುವ ಮೂಲಕ ರಾಮನಗರ ಸಂಪೂರ್ಣವಾಗಿ ಜೆಡಿಎಸ್ ಮುಕ್ತವಾಗಿದೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ ಮತ್ತು ಕನಕಪುರದಲ್ಲಿ ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ಚನ್ನಪಟ್ಟಣದಲ್ಲೂ ಗೆಲ್ಲುವ ಮೂಲಕ ಇಡೀ ಜಿಲ್ಲೆಯನ್ನೇ ಜೆಡಿಎಸ್‌ನಿಂದ ಮುಕ್ತಿಗೊಳಿಸಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿಗ್ಗಾಂವಿಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಸ್ವತಃ ಬೊಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರಗೆ ತೀವ್ರ ಮುಖಭಂಗವಾಗಿದೆ.
ಗಣಿ ಜಿಲ್ಲೆ ಬಳ್ಳಾರಿಯ ಸಂಡೂರಿನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತೇನೆಂದು ಅತಿಯಾದ ಆತವಿಶ್ವಾಸದಿಂದ ಬೀಗಿದ್ದ ಮಾಜಿ ಸಚಿವ ಜನಾರ್ಧನರೆಡ್ಡಿಗೂ ಈ ಚುನಾವಣೆ ಸರಿಯಾದ ಪಾಠವನ್ನೇ ಕಲಿಸಿದೆ.
ಪ್ರಾರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಸಿ.ಪಿ.ಯೋಗೇಶ್ವರ್, ಕೊನೆ ಸುತ್ತಿನ ಮತ ಎಣಿಕೆ ಮುಗಿದಾಗ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ 25,903 ಮತಗಳ ಅಂತರಗಳಿಂದ ಗೆಲುವು ಸಾಧಿಸಿದ್ದಾರೆ.
ವಿಜೇತ ಸಿ.ಪಿ.ಯೋಗೇಶ್ವರ್ 99,320 ಮತಗಳನ್ನು ಪಡೆದರೆ, ನಿಖಿಲ್ ಕುಮಾರಸ್ವಾಮಿ 73,417 ಮತಗಳನ್ನು ಪಡೆದು ಹ್ಯಾಟ್ರಿಕ್ ಸೋಲಿನ ರುಚಿ ಅನುಭವಿಸಿದರು.ಯೋಗೇಶ್ವರ್‌ಗೆ ಬಹುತೇಕ ಚನ್ನಪಟ್ಟಣ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಮತದಾರ ಕೈ ಹಿಡಿದಿದ್ದಾನೆ. ಈ ಕ್ಷೇತ್ರದಲ್ಲಿ ಗೆಲ್ಲಬೇಕೆಂದು ಪಟ್ಟು ಹಿಡಿದಿದ್ದ ಜೆಡಿಎಸ್ ಹಾಗೂ ಬಿಜೆಪಿ ತಂತ್ರ ತಲೆಕೆಳಗಾಗಿದೆ.
ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಅಶ್ವತ್‌್ಥ ನಾರಾಯಣ ಸೇರಿದಂತೆ ಅನೇಕ ನಾಯಕರು ನಡೆಸಿದ ಪ್ರಚಾರ ನಿಖಿಲ್ ಕುಮಾರಸ್ವಾಮಿಯನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾಗಿದೆ.
ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರು ತಿಂಗಳ ಹಿಂದೆಯೇ ಕ್ಷೇತ್ರದಲ್ಲಿ ಬೀಡುಬಿಟ್ಟು ಮತದಾರರ ಮನಗೆದ್ದಿದ್ದರು. ಅವರು ನಡೆಸಿದ ತಂತ್ರ ಕೈ ಹಿಡಿದಿದೆ.
ಶಿಗ್ಗಾಂವಿಯಲ್ಲಿ ತಾವೇ ಗೆದ್ದಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಮಾಜಿ ಸಿಎಂ ಬಸವರಾಜ ಬೊಮಾಯಿ ವಿಫಲರಾಗಿದ್ದಾರೆ. ಹಲವರ ವಿರೋಧದ ನಡುವೆಯೂ ತಮ ಪುತ್ರ ಭರತ್ ಬೊಮಾಯಿಗೆ ಟಿಕೆಟ್ ಕೊಟ್ಟಿದ್ದರು. ತಾವು ಎದುರಿಸಿದ ಮೊದಲ ಚುನಾವಣೆಯಲ್ಲೇ ಅವರಿಗೆ ಸೋಲಿನ ರುಚಿ ಉಂಟಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಪಠಾಣ ಯಾಸಿರ್ ಅಹಮದ್ ಖಾನ್ ಅವರು 88,985, ಭರತ್ ಬೊಮಾಯಿ 74,860 ಮತಗಳನ್ನು ಪಡೆದಿದ್ದಾರೆ. ಪ್ರಾರಂಭದಲ್ಲಿ ಭರತ್ ಬೊಮಾಯಿ ಮುನ್ನಡೆ ಸಾಧಿಸಿದ್ದರು. ಆದರೆ, ಆರನೆ ಸುತ್ತಿನಿಂದ ಕಾಂಗ್ರೆಸ್ ಅಭ್ಯರ್ಥಿ ನಿರಂತರವಾಗಿ ಮುನ್ನಡೆ ಸಾಧಿಸಿ ಅಂತಿಮವಾಗಿ ಗೆಲುವಿನ ನಗೆ ಬೀರಿದರು.
ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲ್ಲುವ ಮೂಲಕ ಇದು ಪಕ್ಷದ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಸಚಿವ ಸಂತೋಷ್‌ಲಾಡ್, ಸಂಸದ ಇ.ವಿ.ತುಕಾರಾಮ್ ಅವರ ಸಂಘಟಿತ ಹೋರಾಟ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದೆ.
ಕ್ಷೇತ್ರದಲ್ಲಿ ಮುಡಾ ಹಗರಣ ಹಾಗೂ ಲಿಂಗಾಯತ ಕ್ರೋಢೀಕರಣಕ್ಕೆ ಯತ್ನಿಸಿದ್ದ ಬಿಜೆಪಿ ಕಾರ್ಯತಂತ್ರ ಕೈ ಹಿಡಿದಿಲ್ಲ. ವಿಜೇತ ಅನ್ನಪೂರ್ಣ ಅವರು 93051, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು 83,843 ಮತಗಳನ್ನು ಪಡೆದಿದ್ದು, ಸುಮಾರು 11,000 ಮತಗಳ ಅಂತರದಿಂದ ಕೈ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.