ಕಥಾನಾಯಕನ ಹೆಸರು ಅರವಿಂದಸ್ವಾಮಿ.ಜನ ಅವನನ್ನ ಆರಾಮ್ ಅರವಿಂದ ಸ್ವಾಮಿ ಅಂತ ಕರೀತಿರ್ತಾರೆ.ಸದಾ ಲವಲವಿಕೆಯಿಂದ ತುಂಬಾ ಶೋಕಿ ಮಾಡ್ಕೊಂಡು ಎಲ್ಲರ ಮುಂದೆ ತಿರುಗುತ್ತಿರುತ್ತಾನೆ. ‘ನೀನು ಬಿಡು ತುಂಬಾ ಆರಾಮ್’ ಎಂದು ಕಂಡವರೆಲ್ಲ ಅಂದಾಗ ಅವರನ್ನ ಬೈಯ್ದುಕೊಳ್ತಾನೆ.ಯಾಕಂದ್ರೆ ಜನ ಅಂದ್ಕೊಂಡಹಾಗೆ
ಅವನ ಜೀವನ ಇರುವುದಿಲ್ಲ. ನೂರಾರು ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತಿರುತ್ತಾನೆ. ತನಗೂ ಕಷ್ಟಗಳಿವೆ ಎಂದು ಹೇಳಿಕೊಂಡರು ಜನ ನಂಬುವುದಿಲ್ಲ.ತುಂಬಾ ಸುಳ್ಳು ಹೇಳುವ ಜಾಯಮಾನ ಬೇರೆ.ಹೀಗಿರುವಾಗ ಅವನ ಬಾಳಲ್ಲಿ ಏನಿಲ್ಲ ಸಮಸ್ಯೆಗಳು ಬಂದು ಹೇಗೆಲ್ಲಾ ತಿರುವುಗಳು ಪಡೆದುಕೊಳ್ಳುತ್ತವೆ ಎಂಬುವುದಕ್ಕೆ ಈ ವಾರ ತೆರೆ ಕಂಡಿರುವ ಆರಾಮ್ ಅರವಿಂದಸ್ವಾಮಿ ಚಿತ್ರದಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ
ನಾಯಕ ಅನೀಶ್ ಪಾತ್ರಕ್ಕೆ ಈ ಹಿಂದಿನ ಚಿತ್ರಗಳಿಗಿಂತ ಬೇರೆಯದ್ದೇ ರೂಪ ಇದೆ.ಕಾಮಿಡಿ, ಲವ್,ಎಮೋಷನ್,ಆಕ್ಷನ್ ಎಲ್ಲವನ್ನೂ ಪ್ರಯತ್ನಪಟ್ಟಿದ್ದಾರೆ. ಸಿನಿಮಾದ ಕಥೆ ಸರಳವಾಗಿದ್ದರು ಹೇಳುವ ಶೈಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.ತಂದೆ ಶ್ರೀಮಂತರ ಮನೆಯ ಕಾರ್ ಡ್ರೈವರ್ ಆಗಿದ್ದರು ಕಥಾನಾಯಕ ಮಾತ್ರ ತಾನು ದೊಡ್ಡ ಶ್ರೀಮಂತನೆಂದು ಬಿಂಬಿಸಿಕೊಂಡು, ಸುಳ್ಳು ಹೇಳ್ಕೊಂಡು ಒಂದು ಹುಡುಗಿಯನ್ನು ಬುಟ್ಟಿಗೆ ಹಾಕೊಂಡಿರ್ತಾನೇ. ಇಬ್ಬರು ಪ್ರೀತಿ ಮಾಡುತ್ತಿರುತ್ತಾರೆ. ಒಂದು ದಿನ ಶ್ರೀಮಂತರ ಹುಡುಗಿಯನ್ನು ಮದುವೆಯಾಗ್ಬಿಡ್ತಾನೆ. ಹಾಗಾದ್ರೆ ಪ್ರೀತಿ ಮಾಡಿದ ಹುಡುಗಿ ಎಲ್ಲೋದ್ಲು? ನೀವು ಸಿನಿಮಾ ನೋಡಲೇಬೇಕು
‘ಆರಾಮ್ ಅರವಿಂದ ಸ್ವಾಮಿ’ ಇದೊಂದು ಪಕ್ಕ ಎಂಟರ್ಟೈನ್ಮೆಂಟ್ ಸಿನಿಮಾ. ಅನೀಶ್ ಮತ್ತು ಮಿಲನ ಪರದೆಯ ಮೇಲೆ ಪ್ರೇಕ್ಷಕರಿಗೆ ಫುಲ್ ಎಂಟರ್ಟೈನ್ಮೆಂಟ್ ಕೊಟ್ಟಿದ್ದಾರೆ. ಮಿಲನ ಪ್ರಕಾಶ್ ಮೊಟ್ಟಮೊದಲ ಬಾರಿಗೆ ಹೊಸತನಕ್ಕೆ ತೆರೆದುಕೊಂಡಿರುವುದು ನೋಡುಗರಿಗೆ ಇಷ್ಟವಾಗುತ್ತದೆ . ಇವರಿಬ್ಬರ ಕಾಂಬಿನೇಷನ್ ಕಥೆಗೆ ಪೂರಕವಾಗಿದ್ದು ನಿರ್ದೇಶಕರು ಇದನ್ನ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಎಲ್ಲಿಯೂ ಕಥೆ ತಲೆ ಕೆಡಿಸುವುದಿಲ್ಲ ಅಷ್ಟರ ಮಟ್ಟಿಗೆ ಸರಳವಾಗಿ ಸುಂದರವಾಗಿ ಕಟ್ಟಲಾಗಿದೆ. ಅದಕ್ಕೆ ಪೂರಕವಾಗಿರುವುದು ಸಂಗೀತ ಮತ್ತು ಛಾಯಾಗ್ರಹಣದ ಕೆಲಸ ಎಲ್ಲವೂ ಸಿನಿಮಾವನ್ನು ಶ್ರೀಮಂತ ಗೊಳಿಸಿವೆ
ಸುಳ್ಳು ಬುರುಕ ಅರವಿಂದ ಸ್ವಾಮಿಯ ತರ್ಲೆ ಆಟಗಳು, ಸಖತ್ ಕಾಮಿಡಿ, ಹೊಡಿಯೋ ಪಂಚ್ ಡೈಲಾಗಗಳು, ರಂಗೇರಿಸಿದ ಪ್ರೀತಿ, ಆಕ್ಷನ್, ಎಲ್ಲವೂ ಕಥೆಯನ್ನು ಶ್ರೀಮಂತ ಗಳಿಸಿವೆ. ದುಡ್ಡು ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕನಿಗೆ ಆರಾಮ್ ಅರವಿಂದಸ್ವಾಮಿ ಫುಲ್ ಮೀಲ್ಸ್ ಕೊಟ್ಟಿದ್ದಾನೆ.