Thursday, April 16, 2026
Homeರಾಜ್ಯನಾನು ಜೆಡಿಎಸ್‌‍ನಲ್ಲೇ ಇರುತ್ತೇನೆ, ಕಾರ್ಯಕರ್ತರಿಗೆ ಯಾವುದೇ ಆತಂಕ ಬೇಡ : ಶಾಸಕ ಜಿ.ಟಿ.ದೇವೇಗೌಡ

ನಾನು ಜೆಡಿಎಸ್‌‍ನಲ್ಲೇ ಇರುತ್ತೇನೆ, ಕಾರ್ಯಕರ್ತರಿಗೆ ಯಾವುದೇ ಆತಂಕ ಬೇಡ : ಶಾಸಕ ಜಿ.ಟಿ.ದೇವೇಗೌಡ

I will remain in JDS, workers need not worry: MLA GT Deve Gowda

ಮೈಸೂರು,ಜ.19- ನಾನು ಜೆಡಿಎಸ್‌‍ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದು, ಜೆಡಿಎಸ್‌‍ನಲ್ಲೇ ಗಟ್ಟಿಯಾಗಿ ಇದ್ದೇನೆ, ಜೆಡಿಎಸ್‌‍ನಲ್ಲೇ ಇರುತ್ತೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌‍ನ ವಿವಿಧ ಹುದ್ದೆಗಳಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷದ ವರಿಷ್ಠರ ಬಗ್ಗೆ ಯಾವತ್ತೂ ಟೀಕೆ ಮಾಡಿಲ್ಲ. ನಮ ಪಕ್ಷದ ಕಾರ್ಯಕರ್ತರಿಗೆ ಯಾವುದೇ ರೀತಿಯ ಆತಂಕ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದೆ. ಚುನಾವಣೆ ಬಂದಾಗ ಬೇರೆ ವಿಚಾರ ಚರ್ಚೆ ಮಾಡೋಣ. ಸದ್ಯಕ್ಕೆ ಜೆಡಿಎಸ್‌‍ನಲ್ಲೇ ಇದ್ದು, ಜೆಡಿಎಸ್‌‍ನಿಂದ ಒಂದು ಹೆಜ್ಜೆಯನ್ನೂ ತೆಗೆದಿಲ್ಲ ಎಂದಿದ್ದಾರೆ.

ಕೆಲ ವಿಚಾರಗಳಲ್ಲಿ ನನಗೆ ನೋವಾಗಿರುವುದು ಜೆಡಿಎಸ್‌‍ ನಾಯಕರಿಗೆ ಗೊತ್ತಿದೆ. ನೋವಾಗಿದೆ ಎಂದು ಪಕ್ಷದಿಂದ ಹೊರಹೋಗಿಲ್ಲ. ಜೆಡಿಎಸ್‌‍ ವಿರುದ್ಧವಾಗಿ ಯಾವತ್ತೂ ನಾನು ಮಾತನಾಡಿಲ್ಲ, ಮಾತನಾಡುವುದೂ ಇಲ್ಲ. ಒಳ್ಳೆಯ ಕಾಲ ಬರುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ. ಕಾಲ ಕಳೆದಂತೆ ಎಲ್ಲಾ ಮುನಿಸು, ನೋವು ಮಾಯವಾಗುತ್ತದೆ ಎಂದು ಹೇಳಿದ್ದಾರೆ.

ನಿನ್ನೆ ಜೆಡಿಎಸ್‌‍ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನೇತೃತ್ವದಲ್ಲಿ ಮೈಸೂರು ಜಿಲ್ಲೆಯ ಜೆಡಿಎಸ್‌‍ ಮುಖಂಡರೊಂದಿಗೆ ಸಭೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ಯಾರಿಗೂ ದ್ರೋಹ ಮಾಡುವ ಬುದ್ಧಿ ನನಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್‌‍ ತೊರೆದು ಕಾಂಗ್ರೆಸ್‌‍ಗೆ ಹೋದ ಮೇಲೆ ಮೈಸೂರು ಭಾಗದಲ್ಲಿ ಜೆಡಿಎಸ್‌‍ ಪಕ್ಷವನ್ನು ಕಟ್ಟಿದ್ದೇನೆ. ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಒಟ್ಟಾಗಿ ಇದ್ದೇವೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕೆಂದು ಬಯಸಿ ಪಕ್ಷ ಕಟ್ಟಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆಲಸ ಹೆಚ್ಚಾಗಿದ್ದು, ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News