ಬೆಂಗಳೂರು, ಆ.3-ರಾಜ್ಯ ಸರ್ಕಾರದ ನೂತನ ಸಚಿವರಾಗಲು ಅವಕಾಶ ಮಾಡಿಕೊಟ್ಟಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಿಯೋಜಿತ ನೂತನ ಸಚಿವ ಹೆಚ್.ಸಿ.ಬಾಲಕೃಷ್ಣ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅವರು, ನನ್ನ ಮೇಲೆ ವಿಶ್ವಾಸವಿಟ್ಟು, ಮಂತ್ರಿಯಾಗಲು ಅವಕಾಶ ನೀಡಿ ಹೊಸ ಜವಾಬ್ದಾರಿ ನೀಡಿರುವ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಮಾಗಡಿ ರಂಗನಾಥಸ್ವಾಮಿ, ಮನೆ ದೇವರು ನರಸಿಂಹಸ್ವಾಮಿ, ಕಾಲಭೈರವೇಶ್ವರಸ್ವಾಮಿಯ ಆಶೀರ್ವಾದದಿಂದ ಸಚಿವ ಸ್ಥಾನ ದೊರೆತ್ತಿದೆ. ಹಳೇ ಮೈಸೂರು ಭಾಗದಲ್ಲಿ ನನಗೆ ಈ ಹೊಸ ಜವಾಬ್ದಾರಿ ವಹಿಸಿದ್ದು, ನಿಭಾಯಿಸಿಕೊಂಡು ಹೋಗುತ್ತೇನೆ. ಅಧಿಕಾರ ಇರಲಿ ಇರದಿರಲಿ ಮಾಗಡಿ ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಐದು ಬಾರಿ ಚುನಾಯಿಸಿದ್ದಾರೆ. ಅವರಿಗೂ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕ್ಷೇತ್ರದ ಜವಾಬ್ದಾರಿ ಹಾಗೂ ಸಚಿವ ಸ್ಥಾನದ ಜವಾಬ್ದಾರಿಯನ್ನು ಜೊತೆ ಜೊತೆಯಲ್ಲೇ ಕೊಂಡೊಯ್ಯುತ್ತೇನೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.
