Homeರಾಜ್ಯಆಂಟಿಯ ಮೋಡಿಗೆ ಮರುಳಾಗಿ ಲಕ್ಷಾಂತರ ಹಣ ಕಳೆದುಕೊಂಡ ಟ್ಯಾಟೂ ಆರ್ಟಿಸ್ಟ್‌

ಆಂಟಿಯ ಮೋಡಿಗೆ ಮರುಳಾಗಿ ಲಕ್ಷಾಂತರ ಹಣ ಕಳೆದುಕೊಂಡ ಟ್ಯಾಟೂ ಆರ್ಟಿಸ್ಟ್‌

ಬೆಂಗಳೂರು, ಸೆ.17- ಟ್ಯಾಟೂ ಆರ್ಟಿಸ್ಟ್‌ನನ್ನು ಮರುಳು ಮಾಡಿದ ಎರಡು ಮಕ್ಕಳ ತಾಯಿ, ಮದುವೆಯಾಗುವುದಾಗಿ ನಂಬಿಸಿ ಆತನಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎರಡು ವರ್ಷಗಳ ಹಿಂದೆ ಟ್ಯಾಟೂ ಸ್ಟುಡಿಯೋದಲ್ಲಿ ಟ್ಯಾಟೂ ಮಾಡಿಸಲು ಪರಿಚಯವಾದ ಮಹಿಳೆ, ತನಗೆ ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ. ಆದರೆ, ಗಂಡ ಕಾರಣಾಂತರಗಳಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾಳೆ. ಈ ನಡುವೆ ಇಬ್ಬರ ನಡುವೆ ಸ್ನೇಹವಾಗಿ, ಪ್ರೀತಿಗೆ ತಿರುಗಿದೆ. ಆತನಿಗೂ ಪತ್ನಿಯೊಂದಿಗೆ ವಿಚ್ಛೇದನವಾಗಿತ್ತು. ಈ ವೇಳೆ ಆತನನ್ನು ಮದುವೆಯಾಗುವುದಾಗಿ ಮಹಿಳೆ ನಂಬಿಸಿದ್ದಾಳೆ.

ಮಹಿಳೆಯ ಮೋಡಿಯ ಮಾತು ನಂಬಿ ಟ್ಯಾಟೂ ಆರ್ಟಿಸ್ಟ್‌ ಹಲವು ಬಾರಿ ಆಕೆಗೆ ಹಣ ಕೊಟ್ಟಿದ್ದಾನೆ. ಈ ಮಧ್ಯೆ ಕಳೆದ ಒಂದು ವರ್ಷದಿಂದ ಮದುವೆ ವಿಷಯ ಪ್ರಸ್ತಾಪವಾದಾಗಲೆಲ್ಲಾ ಮಹಿಳೆ ಮುಂದೂಡುತ್ತಲೇ ಬಂದಿದ್ದಾಳೆ. ಇತ್ತೀಚೆಗೆ ಆತ ಮಹಿಳೆಗೆ ಕರೆ ಮಾಡಿದಾಗ, ಆಕೆ ಕರೆ ಸ್ವೀಕರಿಸದಿದ್ದರಿಂದ ಖುದ್ದಾಗಿ ಮನೆ ಬಳಿ ತೆರಳಿದ್ದಾನೆ. ಈ ವೇಳೆ ಪರಪುರುಷನ ಜೊತೆ ಅಶ್ಲೀಲವಾಗಿ ಆಕೆ ಮಾತನಾಡುತ್ತಿದ್ದುದನ್ನು ಗಮನಿಸಿ ಪ್ರಶ್ನಿಸಿದ್ದಾನೆ.

ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಮಹಿಳೆ ಕಬ್ಬಿಣದ ರಾಡಿನಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾಳೆ.ಹಲ್ಲೆ ಸಂಬಂಧ ಟ್ಯಾಟೂ ಆರ್ಟಿಸ್ಟ್‌ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗೆ ಟ್ಯಾಟೂ ಆರ್ಟಿಸ್ಟ್‌ಗೆ ಸಿನಿಮಾಗಳಲ್ಲೂ ನಟಿಸಲು ಅವಕಾಶ ಸಿಕ್ಕಿತ್ತು. ಈತ ಸಾಮಾಜಿಕ ಜಾಲತಾಣದಲ್ಲಿ ಒಂದು ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ ಹೊಂದಿದ್ದಾರೆ.

RELATED ARTICLES
spot_img

Latest News