ಬೆಂಗಳೂರು, ಸೆ.17-ಬಂದರು ನಗರಿ ಮಂಗಳೂರಿನಲ್ಲಿ ನಾಳೆ ರಾಜ್ಯಸಚಿವ ಸಂಪುಟ ಸಭೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.ಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಸಚಿವ ಸಂಪುಟ ಸಭೆ ಆರಂಭವಾಗಲಿದೆ.
ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಬಹುತೇಕ ಸಚಿವರು ಇಂದು ಸಂಜೆ ಮಂಗಳೂರಿಗೆ ಪ್ರಯಾಣಿಸಲಿದ್ದಾರೆ.ಕಡಲ ನಗರಿ ಮಂಗಳೂರಿನ ಪಡಿಲಿನಲ್ಲಿರುವ ಪ್ರಜಾಸೌಧವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಜನರ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದೆ. ನಾಳೆ ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಕರಾವಳಿ ಭಾಗದ ಮೂರು ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಪುಟಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ.
ಕರಾವಳಿ ಭಾಗದ ಪ್ರವಾಸೋದ್ಯಮ, ಮೀನುಗಾರಿಕೆ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಇತ್ತೀಚೆಗೆ ಸಂಪುಟ ಸಭೆಯ ಪೂರ್ವಭಾವಿಯಾಗಿ ಆ ಭಾಗದ ಸಚಿವರು, ಶಾಸಕರ ಸಭೆ ನಡೆಸಿ ಸಲಹೆ-ಸೂಚನೆಗಳನ್ನು ನೀಡಿದ್ದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ರಾಜಧಾನಿಯಿಂದ ಹೊರಗೆ ಸಂಪುಟ ಸಭೆ ನಡೆಯುತ್ತಿರುವುದು ಇದೇ ಮೊದಲಲ್ಲ. ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜಧಾನಿಯಿಂದ ಹೊರಗೆ ಸಂಪುಟಸಭೆ ನಡೆಸುವುದನ್ನು ಆರಂಭಿಸಲಾಯಿತು ಎಂಬ ಮಾಹಿತಿ ಇದೆ. ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಸಂಪುಟ ಸಭೆ ನಡೆಸಲಾಗಿದೆ.
ಅನಂತರ ಬಂದಂತಹ ಬಹುತೇಕ ಎಲ್ಲಾ ಮುಖ್ಯಮಂತ್ರಿಗಳು ರಾಜ್ಯದ ಒಂದಲ್ಲ ಒಂದು ಕಡೆ ಸಂಪುಟ ಸಭೆ ನಡೆಸಿದ್ದಾರೆ. ಬೆಳಗಾವಿ, ಕಲಬುರಗಿ, ಮಲೆಮಹದೇಶ್ವರ ಬೆಟ್ಟ, ನಂದಿ ಬೆಟ್ಟದಲ್ಲೂ ಸಂಪುಟ ಸಭೆಯನ್ನು ನಡೆಸಲಾಗಿದೆ.
ಆಯಾ ಭಾಗ ಇಲ್ಲವೇ ವಿಭಾಗದ ಅಭಿವೃದ್ಧಿಗೆ ಒತ್ತು ನೀಡುವಂತಹ ತೀರ್ಮಾನಗಳನ್ನು ಕೈಗೊಂಡು ಜನರ ನೆರವಿಗೆ ಸರ್ಕಾರ ಸಿದ್ಧವಿದೆ ಎಂಬುದನ್ನು ತೋರಿಸುವ ಪ್ರಯತ್ನ ಇದಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ನಂದಿ ಬೆಟ್ಟ ಸೇರಿದಂತೆ ರಾಜಧಾನಿಯಿಂದ ಹೊರಗೆ ಸಂಪುಟ ಸಭೆ ನಡೆಸಲಾಗಿತ್ತು.
