Homeರಾಜ್ಯB to A ಖಾತಾ ಆಂದೋಲನದಿಂದ 58 ಕೋಟಿ ರೂ.ಆದಾಯ

B to A ಖಾತಾ ಆಂದೋಲನದಿಂದ 58 ಕೋಟಿ ರೂ.ಆದಾಯ

ಬೆಂಗಳೂರು,ಸೆ.17- ಬಿ ಖಾತೆ ಹೊಂದಿರುವ ಆಸ್ತಿ ಮಾಲೀಕರಿಗೆ ಎ ಖಾತೆಗೆ ಪರಿವರ್ತನೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ನೀಡಿದ್ದ ವಿಶೇಷ ಅವಕಾಶಕ್ಕೆ ಬೆಂಗಳೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕಳೆದ ಮೂರು ತಿಂಗಳಲ್ಲಿ ಐದು ನಗರಪಾಲಿಕೆಗಳ ಖಜಾನೆಗೆ 58 ಕೋಟಿ ಆದಾಯ ಹರಿದುಬಂದಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರಪಾಲಿಕೆಗಳಲ್ಲಿ ಮೇ 23, 2026ರಂದು ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಮಾಡಿಕೊಳ್ಳುವ ಆಸ್ತಿ ಮಾಲೀಕರಿಗೆ ಸೀಮಿತ ಅವಧಿಯಲ್ಲಿ ವಿಶೇಷ ಅವಕಾಶ ಕಲ್ಪಿಸಲಾಗಿತ್ತು.

ಸರ್ಕಾರದ ಆದೇಶದಂತೆ, 2026ರ ಮೇ 15ರಿಂದ ಆಗಸ್ಟ್‌ 23ರವರೆಗೆ 100 ದಿನಗಳ ಕಾಲ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಸಂದರ್ಭದಲ್ಲಿ ಏಕನಿವೇಶನಗಳ ವಿನ್ಯಾಸ ಅನುಮೋದನೆಗೆ ಪಾವತಿಸಬೇಕಿದ್ದ ಶುಲ್ಕವನ್ನು ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ.5ರಿಂದ ಶೇ.2ಕ್ಕೆ ಇಳಿಸಲಾಗಿತ್ತು.

ಈ ಅವಕಾಶವನ್ನು ಬಳಸಿಕೊಂಡು ಸಾವಿರಾರು ಆಸ್ತಿ ಮಾಲೀಕರು ಎ ಖಾತೆಗೆ ಅರ್ಜಿ ಸಲ್ಲಿಸಿದ್ದಾರೆ.ಆಸ್ತಿ ದಾಖಲೆಗಳ ಸುರಕ್ಷತೆ ಹಾಗೂ ವಂಚನೆ ತಡೆಗಟ್ಟುವ ಉದ್ದೇಶದಿಂದ ಬೆಂಗಳೂರಿನ 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಡಿಜಿಟಲೀಕರಣಗೊಳಿಸಲಾಗಿದೆ. ಅಂತಿಮ ಇ-ಖಾತಾಗಳನ್ನು ಮನೆಬಾಗಿಲಿಗೆ ತಲುಪಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ರಾಜ್ಯ ಸರ್ಕಾರದ ಭೂ ಗ್ಯಾರಂಟಿ ಯೋಜನೆಯಡಿ ಮೇ 16ರಿಂದ ಸೇವಾ ಕೇಂದ್ರಗಳನ್ನು ಆರಂಭಿಸಿ, ಪ್ರತಿ ಕೇಂದ್ರದಲ್ಲಿ ಸುಮಾರು 100 ನಾಗರಿಕರಿಗೆ ಸೇವೆ ಒದಗಿಸುವ ವ್ಯವಸ್ಥೆ ಮಾಡಲಾಗಿತ್ತು.ಅಭಿಯಾನದಡಿ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆಗಾಗಿ ಒಟ್ಟು 81,502 ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಿದ್ದು, ಈ ಪೈಕಿ 26,647 ಮಂದಿ ಶುಲ್ಕ ಪಾವತಿಸಿದ್ದಾರೆ. ಇದರಿಂದ ಐದು ನಗರಪಾಲಿಕೆಗಳಿಗೆ ಒಟ್ಟು ಸುಮಾರು 58 ಕೋಟಿ ಆದಾಯ ಬಂದಿದೆ.

ಉತ್ತರ ಪಾಲಿಕೆಯಲ್ಲಿ 23,703 ಅರ್ಜಿ; ಐದು ನಗರಪಾಲಿಕೆಗಳ ಪೈಕಿ ಬೆಂಗಳೂರು ಉತ್ತರ ನಗರಪಾಲಿಕೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ಮಾಲೀಕರು ಎ ಖಾತೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಉತ್ತರ ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 23,703 ಅರ್ಜಿಗಳು ಬಂದಿದ್ದು, ಈ ಪೈಕಿ 8,052 ಆಸ್ತಿ ಮಾಲೀಕರು ಬಿ ಖಾತೆಯಿಂದ ಎ ಖಾತೆ ಪರಿವರ್ತನೆಗೆ ಹಣ ಪಾವತಿಸಿದ್ದಾರೆ.

ಇದರಿಂದ ಉತ್ತರ ನಗರಪಾಲಿಕೆಯ ಖಜಾನೆಗೆ 15.69 ಕೋಟಿಗೂ ಅಧಿಕ ಆದಾಯ ಬಂದಿದೆ. ಐದು ನಗರಪಾಲಿಕೆಗಳ ಒಟ್ಟು ಆದಾಯದಲ್ಲಿ ಉತ್ತರ ಪಾಲಿಕೆಯ ಪಾಲು ಗಮನಾರ್ಹವಾಗಿದ್ದು, ಬಿ ಖಾತೆಗಳನ್ನು ಎ ಖಾತೆಗಳಾಗಿ ಪರಿವರ್ತಿಸಿಕೊಳ್ಳಲು ನಾಗರಿಕರಲ್ಲಿ ಆಸಕ್ತಿ ಹೆಚ್ಚಿರುವುದು ಇದರಿಂದ ಸ್ಪಷ್ಟವಾಗಿದೆ.ಸೀಮಿತ ಅವಧಿಯ ಅವಕಾಶ ಮುಕ್ತಾಯಗೊಂಡಿದ್ದರೂ, ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಹಾಗೂ ಶುಲ್ಕ ಪಾವತಿ ಪ್ರಕ್ರಿಯೆ ಮುಂದುವರಿದಿರುವ ಹಿನ್ನೆಲೆಯಲ್ಲಿ ನಗರಪಾಲಿಕೆಗಳ ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಉತ್ತರ ನಗರಪಾಲಿಕೆಗೆ ಬಂದ ಒಟ್ಟು ಅರ್ಜಿಗಳು-23703.
ಬಿ ಟೂ ಎ ಖಾತ ಪರಿವರ್ತನೆಗೆ ಹಣ ಪಾವತಿ ಮಾಡಿದ ಅಸ್ತಿ ಮಾಲೀಕರು-8052.
ಒಟ್ಟು ಆದಾಯ-1569896699 ಕೋಟಿ ರೂ.ಗಳು
ದಕ್ಷಿಣ ನಗರಪಾಲಿಕೆಗೆ ಬಂದ ಒಟ್ಟು ಅರ್ಜಿಗಳು-17473
ಬಿ ಟೂ ಎ ಖಾತ ಪರಿವರ್ತನೆಗೆ ಹಣ ಪಾವತಿ ಮಾಡಿದ ಅಸ್ತಿ ಮಾಲೀಕರು-5940.
ಒಟ್ಟು ಆದಾಯ-1373831206.ಕೋಟಿ ರೂ.
ಪಶ್ಚಿಮ ನಗರಪಾಲಿಕೆಗೆ ಬಂದ ಒಟ್ಟು ಅರ್ಜಿಗಳು-22764.
ಬಿ ಟೂ ಎ ಖಾತ ಪರಿವರ್ತನೆಗೆ ಹಣ ಪಾವತಿ ಮಾಡಿದ ಅಸ್ತಿ ಮಾಲೀಕರು-7668.
ಒಟ್ಟು ಆದಾಯ-1459456383.ಕೋಟಿ ರೂ.
ಕೇಂದ್ರ ನಗರಪಾಲಿಕೆಗೆ ಬಂದ ಒಟ್ಟು ಅರ್ಜಿಗಳು-756
ಬಿ ಟೂ ಎ ಖಾತ ಪರಿವರ್ತನೆಗೆ ಹಣ ಪಾವತಿ ಮಾಡಿದ ಅಸ್ತಿ ಮಾಲೀಕರು-113.
ಒಟ್ಟು ಆದಾಯ-22299003.ಕೋಟಿ ರೂ ಹಾಗೂ
ಪೂರ್ವ ನಗರಪಾಲಿಕೆಗೆಬಂದ ಒಟ್ಟು ಅರ್ಜಿಗಳು-16807.
ಬಿ ಟೂ ಎ ಖಾತ ಪರಿವರ್ತನೆಗೆ ಹಣ ಪಾವತಿ ಮಾಡಿದ ಅಸ್ತಿ ಮಾಲೀಕರು-4874.
ಒಟ್ಟು ಆದಾಯ-1346187555.ಕೋಟಿ ರೂ. ಇದರೊಂದಿಗೆ ಐದು ನಗರಪಾಲಿಕೆಗಳಿಂದ ಬಂದ ಅದಾಯ.- ಒಟ್ಟು-5771670846 ರೂ.ಗಳಾಗಿದೆ.

RELATED ARTICLES
spot_img

Latest News